ಚಾಮರಾಜನಗರ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯರಿಬ್ಬರು ದೇವರಿಗೆ ಪತ್ರ ಬರೆದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ.
ಈ ಪತ್ರಗಳು ನಾರಾಯಣಸ್ವಾಮಿ ದೇವಾಲಯದ ಹುಂಡಿ ಎಣಿಕೆ ವೇಳೆ ಪತ್ತೆಯಾಗಿದೆ. ಪತ್ರದಲ್ಲಿ ಮಹಿಳೆಯರು ತಮ್ಮನ್ನು ಬಿಟ್ಟು ಹೋಗಿರುವ ಗಂಡಂದಿರು ಮನೆಗೆ ವಾಪಸ್ ಬರಬೇಕು. ನಾವು ಹೇಳಿದಂತೆ ಕೇಳಬೇಕು ಎಂಬ ಒಕ್ಕಣೆಯುಳ್ಳ ಎರಡು ಪತ್ರಗಳನ್ನು ಹುಂಡಿಗೆ ಹಾಕಿದ್ದಾರೆ.
ಪತ್ರದಲ್ಲಿ, ನನ್ನ ಗಂಡ ಜಗಳವಾಡಿಕೊಂಡು ನನ್ನನ್ನು ಬಿಟ್ಟು ಹೋಗಿದ್ದಾನೆ. ಅವನಿಗೆ ಒಳ್ಳೆ ಬುದ್ಧಿ ಕೊಟ್ಟು ನನ್ನ ಜೊತೆ ಸಂಸಾರ ಮಾಡಲು ಕಳುಹಿಸು. ನಾನು ಹೇಳಿದಂತೆ ನನ್ನ ಗಂಡ ಕೇಳಬೇಕು. ಇಲ್ಲದಿದ್ದರೆ ಅದಕ್ಕೆ ನೀನೆ ಹೊಣೆ ಎಂದು ಸಹ ಪತ್ರಗಳಲ್ಲಿ ಬರೆಯಲಾಗಿದೆ.
ಸಂಸಾರದ ಕಲಹ ನಿವಾರಿಸುವಂತೆ ಪತ್ರದ ಮೂಲಕ ದೇವರ ಮೊರೆ ಹೋಗಿರುವ ಮಹಿಳೆಯರು ಪತ್ರದಲ್ಲಿ ತಮ್ಮ ಹೆಸರು ಮತ್ತು ವಿಳಾಸ ನಮೂದಿಸಿಲ್ಲ. ಸದ್ಯ ಈ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.