ಚಿಕ್ಕಮಗಳೂರು: ವೈದ್ಯರ ನಿರ್ಲಕ್ಷ್ಯದಿಂದ ಎರಡು ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಕಡೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಕಡೂರು ತಾಲೂಕಿನ ಅಂಚೆಚೋಮನಹಳ್ಳಿ ಗ್ರಾಮದ ಶೀಲಾ(22) ಮೃತ ದುರ್ದೈವಿ. ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತಳ ಸಂಬಂಧಿಕರು ಆರೋಪಿಸಿ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಮೃತಳ ಶವವನ್ನು ಪೊಲೀಸ್ ಠಾಣೆ ಮುಂದಿಟ್ಟು ಸಂಬಂಧಿಕರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ ಹಾಗೂ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮದುವೆಯಾಗಿ ಮೂರು ವರ್ಷವಾಗಿದೆ. ಮೊದಲ ಮಗು ಹೆಣ್ಣಾಗಿದ್ದು, ಈಗ ಮುದ್ದಾದ ಗಂಡು ಮಗು ಜನಿಸಿದೆ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಮಗು ಅಮ್ಮನನ್ನು ಕಳೆದುಕೊಂಡಿದೆ ಹಾಗೂ ಪೋಷಕರು ಮಗಳನ್ನು ಕಳೆದುಕೊಂಡಿದ್ದೇವೆ ಎಂದು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮುಂದೆ ಗೋಳಾಡಿದ್ದಾರೆ.
Advertisement
Advertisement
ಎರಡು ದಿನದ ಹಿಂದೆ ಡೆಲಿವರಿಯಾದ ಶೀಲಾಗೆ ತೀವ್ರವಾದ ರಕ್ತಸ್ರಾವ ಆಗುತ್ತಿತ್ತು. ನಂತರ ವೈದ್ಯರು ಬಾಣಂತಿಯನ್ನು ಶಿವಮೊಗ್ಗಕ್ಕೆ ಕರೆದೊಯ್ಯುವಂತೆ ಸೂಚಿಸಿದ್ದರು. ಬಾಣಂತಿಯನ್ನು ಶಿವಮೊಗ್ಗಕ್ಕೆ ಕರೆದೊಯ್ದು ಚಿಕಿತ್ಸೆಗೆ ಸಿದ್ಧತೆ ನಡೆಸಿಕೊಳ್ಳುವ ಮುನ್ನವೇ ಸಾವಿಗೀಡಾಗಿದ್ದಾರೆ. 22 ವರ್ಷದ ಯುವತಿ ಸಾವಿಗೆ ಕಡೂರು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತಳ ಪೋಷಕರು ಆರೋಪಿಸಿ ವೈದ್ಯರ ವಿರುದ್ಧ ಪೊಲೀಸ್ ಠಾಣೆ ಮುಂದೆ ಕಣ್ಣೀರಿಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಅಕ್ಷಯ್, ಈಗಾಗಲೇ ಡಿ.ಎಚ್.ಓ ಜೊತೆ ಮಾತನಾಡಿದ್ದು, ತನಿಖೆ ಮಾಡುವುದಾಗಿ ತಿಳಿಸಿದ್ದಾರೆ. ತನಿಖೆಯ ರಿಪೋರ್ಟ್ ಬಂದ ಬಳಿಕ ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.