– 1 ತಿಂಗಳ ಹಿಂದೆ ಪತಿ ಕೊಲೆ
ಚಿಕ್ಕಬಳ್ಳಾಪುರ: ಕೊಲೆಯಾದ ಗಂಡನ ನೆನಪು ತಾಳಲಾರದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಮುಷ್ಟೂರು ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಚಿಕ್ಕಬಳ್ಳಾಪುರ ತಾಲೂಕಿನ ಮುಸ್ಟೂರು ಗ್ರಾಮದ ನಿವಾಸಿ ಸುನಿತಾ ಎಂದು ಗುರುತಿಸಲಾಗಿದೆ. ಕಳೆದ ತಿಂಗಳು ಪತಿ ವೆಂಕಟೇಶ್ ತನ್ನ ಆಪ್ತ ಸ್ನೇಹಿತರಿಂದಲೇ ಹಳೆ ದ್ವೆಷದ ಹಿನ್ನೆಲೆಯಲ್ಲಿ ಕೊಲೆಯಾಗಿದ್ದ. ಇದಾದ ಬಳಿಕ ಗಂಡನ ನೆನಪಲ್ಲೇ ಕಾಲ ಕಳೆಯುತ್ತಿದ್ದ ಪತ್ನಿ ಸುನಿತಾ, ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಹೀಗೆ ಹಲವು ಶುಭ ಸಮಾರಂಭಗಳಲ್ಲಿ ತನ್ನ ಪ್ರೀತಿಯ ಗಂಡ ತೋರುತ್ತಿದ್ದ ಅಕ್ಕರೆ, ಆರೈಕೆ ನೆನಪಾಗುತ್ತಿತ್ತು. ಜೊತೆಗೆ ಗಂಡನ ಕೊಲೆ ಮಾಡಿದ ಆರೋಪಿಗಳು ರಾಜಾರೋಷವಾಗಿ ಊರಲ್ಲಿ ತಿರುಗಾಡುತ್ತಿದ್ದನ್ನು ಸಹಿಸದ ಪತ್ನಿ ಸುನಿತಾ, ಇಂದು ಬೆಳಗ್ಗೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಂಡ ಕೊಲೆಯಾದ ನಂತರ ನಿತ್ಯ ಗಂಡನ ಕೊರಗಲ್ಲೇ ನರಳುತ್ತಿದ್ದರು. ಜೊತೆಗೆ ಕೊಲೆಗಾರರು ಕಣ್ಣ ಮುಂದೆ ಓಡಾಟ, ನ್ಯಾಯ ಕೊಡಿಸಲು ಪೊಲೀಸರು ನಿರ್ಲಕ್ಷ್ಯ ವಹಿಸಿದ್ದು ಹೀಗೆ ಹಲವು ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಶಂಕಿಸಿದ್ದಾರೆ. ಸುನಿತಾ ಮನೆ ಕೆಲಸದ ಜೊತೆಗೆ ಕೂಲಿ ಕೆಲಸಕ್ಕೂ ಹೋಗುತ್ತಿದ್ದರು. ಆದರೆ ಪತಿಯ ಸಾವಿನ ನೋವು ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.