ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ಮಾಡಿದ್ದಾರೆ.
ದಿನೇಶ್ ಗುಂಡೂರಾವ್ ಸೋಶೀಯಲ್ ಮೀಡಿಯಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂದ ಪರಿಣಾಮ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ಸದ್ದಡಗಿಸಲು ಇನ್ಯಾವ ಅಸ್ತ್ರಗಳಿವೆಯೋ ಎಂದು ಕೊರೊನಾ ನಿಯಂತ್ರಣ ವೈಫಲ್ಯದ ಬಗ್ಗೆ ದಿನೇಶ್ ವ್ಯಂಗ್ಯ ಮಾಡಿದ್ದಾರೆ.
ಗಂಟೆ ಬಾರಿಸಿ.,ಚಪ್ಪಾಳೆ ತಟ್ಟಿ., ದೀಪ ಹಚ್ಚಿ ಎಂದು ಜನರನ್ನು ಭಾವನಾತ್ಮಕವಾಗಿ ಮೋಸಗೊಳಿಸಿದ ಪರಿಣಾಮವಿದು..!
ಬಿಜೆಪಿ ಘೋಷಿತ 'ವಿಶ್ವಗುರು'ಗಳ ಬತ್ತಳಿಕೆಯಲ್ಲಿ ಕೊರೊನಾ ಸದ್ದಡಗಿಸಲು ಇನ್ಯಾವ ಅಸ್ತ್ರಗಳಿದ್ದಾವೋ..? pic.twitter.com/6wBCDXLaLY
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 31, 2020
ಈ ಬಗ್ಗೆ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, “ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂದು ಜನರನ್ನು ಭಾವನಾತ್ಮಕವಾಗಿ ಮೋಸಗೊಳಿಸಿದ ಪರಿಣಾಮವಿದು. ಬಿಜೆಪಿ ಘೋಷಿತ ‘ವಿಶ್ವಗುರು’ಗಳ ಬತ್ತಳಿಕೆಯಲ್ಲಿ ಕೊರೊನಾ ಸದ್ದಡಗಿಸಲು ಇನ್ಯಾವ ಅಸ್ತ್ರಗಳಿದ್ದಾವೋ?” ಎಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿ, “ಕೆಲುವು ದಿನಗಳಲ್ಲಿ ವಿಶ್ವದಲ್ಲೇ 1ನೇ ಸ್ಥಾನಕ್ಕೆ ಭಾರತ ಏರುವುದು ನಿಸ್ಸಂದೇಹ. ಜನಸಂಖ್ಯೆ ಹೆಚ್ಚಿರುವುದರಿಂದ ಇದು ಆಶ್ಚರ್ಯಕರ ಸಂಗತಿ ಅಲ್ಲ. ಆದರೆ ನೆರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ವೈಫಲ್ಯ ಸ್ಪಷ್ಟವಾಗುತ್ತದೆ. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಬರ್ಮಾ, ಶ್ರೀಲಂಕಾ, ಅಫ್ಘಾನಿಸ್ತಾನ, ಭೂತಾನ್, ಚೀನಾ ನಮಗಿಂತ ಉತ್ತಮ ಸ್ಥಿತಿಯಲ್ಲಿದ್ದಾರೆ” ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 78,512 ಮಂದಿಯಲ್ಲಿ ಕೊರೊನಾ ಸೋಂಕು ದೃಡಪಟ್ಟಿದ್ದು, ಸೋಂಕಿತರ ಸಂಖ್ಯೆ 36 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನೂ ಒಂದೇ ದಿನ 917 ಮಂದಿ ಮೃತಪಡುವ ಮೂಲಕ ರಾಜ್ಯದಲ್ಲಿ ಇದುವರೆಗೂ 64,469 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.