– ಟೆಸ್ಲಾ 2020ರಲ್ಲಿ ಉತ್ಪಾದಿಸಿದ ಕಾರುಗಳ ಸಂಖ್ಯೆ 4.99 ಲಕ್ಷ
– ಜೆಫ್ ಬೆಜೋಸ್‌ಗೆ 2ನೇ ಸ್ಥಾನ
ವಾಷಿಂಗ್ಟನ್: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಅಮೆರಿಕದ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಕಂಪನಿಯ ಸಂಸ್ಥಾಪಕ ಎಲೋನ್ ಮಸ್ಕ್ ಗಂಟೆಗೆ ಅಂದಾಜು 127 ಕೋಟಿ ರೂ. ಸಂಪತ್ತು ಗಳಿಸುತ್ತಿದ್ದಾರೆ.
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ 49 ವರ್ಷದ ಎಲೋನ್ ಮಸ್ಕ್ ಈಗ ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೋಸ್‌ರನ್ನು ಹಿಂದಿಕ್ಕಿದ್ದಾರೆ.
2017ರಿಂದ ಜೆಫ್ ಬೆಜೋಸ್ ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ ಈಗ ಮಸ್ಕ್ ಸಂಪತ್ತು 195 ಶತಕೋಟಿ ಡಾಲರ್( ಅಂದಾಜು 14,23,500 ಕೋಟಿ ರೂ.) ಏರಿಕೆಯಾಗಿದ್ದರೆ ಬಿಜೋಸ್ 185 ಶತಕೋಟಿ ಡಾಲರ್ ಇದೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ತಿಳಿಸಿದೆ.
2020ರ ಜನವರಿಯಲ್ಲಿ ಶ್ರೀಮಂತರ ಪಟ್ಟಿಯಲ್ಲಿ ಎಲೋನ್ ಮಸ್ಕ್ ಈ ಜಾಗತಿಕ ಪಟ್ಟಿಯಲ್ಲಿ 35ನೇ ಸ್ಥಾನದಲ್ಲಿದ್ದರು. ಕಳೆದ ಒಂದು ವರ್ಷದಲ್ಲಿ ಮಸ್ಕ್ ಸಂಪತ್ತು 150 ಶತಕೋಟಿ ಡಾಲರ್ ಹೆಚ್ಚಳವಾಗಿದೆ. ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂಪತ್ತು ಹೆಚ್ಚಿಸಿಕೊಂಡ ವಿಶ್ವದ ಮೊದಲ ಉದ್ಯಮಿ ಎಂಬ ಹೆಗ್ಗಳಿಕೆಗೆ ಮಸ್ಕ್ ಪಾತ್ರವಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಪ್ರತಿ ಗಂಟೆಗೆ 17.36 ದಶಲಕ್ಷ ಡಾಲರ್(ಅಂದಾಜು 127 ಕೋಟಿ ರೂ.) ಸಂಪತ್ತು ಗಳಿಸಿದ್ದರಿಂದ ಮಸ್ಕ್ ವಿಶ್ವದ ನಂಬರ್ 1 ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾದ ಷೇರು ಬೆಲೆ ಭಾರೀ ಏರಿಕೆ ಕಂಡಿದೆ. ಮೊದಲ ಪಟ್ಟ ಸಿಕ್ಕಿದ ಹಿನ್ನೆಲೆಯಲ್ಲಿ ಶುಕ್ರವಾರ ಅಮೆರಿಕದ ಷೇರು ಮಾರುಕಟ್ಟೆ ನಾಸ್ಡಾಕ್‌ನಲ್ಲಿ ಒಂದು ಷೇರು ಬೆಲೆ 816 ಡಾಲರ್ (ಅಂದಾಜು 59 ಸಾವಿರ) ತಲುಪಿದೆ. ಇದು ಟೆಸ್ಲಾ ಇತಿಹಾಸದಲ್ಲಿ ದಾಖಲೆಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಟೆಸ್ಲಾ ಕಂಪನಿಯಲ್ಲಿ ಮಸ್ಕ್ ಶೇ.20 ರಷ್ಟು ಷೇರುಗಳನ್ನು ಹೊಂದಿದ್ದಾರೆ.
ಟೆಸ್ಲಾ ಕಂಪನಿಯ ಷೇರುಗಳು ಒಂದೇ ವರ್ಷದ ಅವಧಿಯಲ್ಲಿ ಶೇ. 743ರಷ್ಟು ಮೇಲೇರಿವೆ. ವಿಶೇಷ ಏನೆಂದರೆ ಟೆಸ್ಲಾ ಕಂಪನಿ 2020ರಲ್ಲಿ ಒಟ್ಟು 4,99,550 ಕಾರನ್ನು ಉತ್ಪಾದಿಸಿತ್ತು. ಹಾಗೆ ಲೆಕ್ಕ ಹಾಕಿದರೆ ಜಗತ್ತಿನ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಗಳಾದ ಜನರಲ್ ಮೋಟರ್ಸ್, ಫೋರ್ಡ್, ಟೊಯೋಟಾ, ಹೋಂಡಾ ಕಂಪನಿಗಳು ಒಂದೇ ತಿಂಗಳಿನಲ್ಲಿ ಈ ಪ್ರಮಾಣದ ಕಾರುಗಳನ್ನು ಉತ್ಪಾದಿಸುತ್ತಿವೆ. ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರು ದುಬಾರಿಯಾಗಿದ್ದರೂ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಬೇಡಿಕೆ ಹೆಚ್ಚಾಗಲಿದೆ. ಈ ಕಾರಣಕ್ಕೆ ಟೆಸ್ಲಾ ಷೇರುಗಳ ಬೆಲೆ ಏರಿಕೆಯಾಗುತ್ತದೆ.
How strange
— Elon Musk (@elonmusk) January 7, 2021
ಅಮೆರಿಕದ ನಾಸಾ ಸ್ಪೇಸ್ ಎಕ್ಸ್ ಕಂಪನಿ ಅಭಿವೃದ್ದಿ ಪಡಿಸಿದ್ದ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಗಗನ ಯಾನಿಗಳನ್ನು ಕಳುಹಿಸಿಕೊಟ್ಟಿತ್ತು. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲೂ ಖಾಸಗಿ ರಂಗಕ್ಕೆ ಅವಕಾಶ ಕಲ್ಪಿಸಿತ್ತು.
Well, back to work …
— Elon Musk (@elonmusk) January 7, 2021