ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರಿದಿದೆ. ಕೊರೊನಾ ಸೋಂಕಿಗೆ ತುತ್ತಾಗಿ ತಾಯಿ-ಮಗ ಒಂದೇ ದಿನ ಕೆಲವೇ ಗಂಟೆಗಳ ಅಂತರದಲ್ಲಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ನಡೆದಿದೆ.
ಕೊರೊನಾಕ್ಕೆ ಬಲಿಯಾದ ತಾಯಿ, ಮಗನನ್ನು ಲಲಿತವ್ವ ಬನ್ನಿಹಟ್ಟಿ (50) ಮತ್ತು ನಾಗರಾಜ್ ಬನ್ನಿಹಟ್ಟಿ (30) ಎಂದು ಗುರುತಿಸಲಾಗಿದೆ. ನಾಗರಾಜ್ ಹಂಸಭಾವಿ ಹೆಸ್ಕಾಂ ಇಲಾಖೆಯಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಮೇ 21 ರಂದು ನಾಗರಾಜ್ ಗೆ ಕೊರೊನಾ ಸೋಂಕು ಧೃಡಪಟ್ಟಿತ್ತು.
ನಾಗರಾಜ್ ಅವರು ಹಿರೇಕೆರೂರು ಕೋವಿಡ್ ಕೇರ್ ಸೆಂಟರ್ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಉಸಿರಾಟದ ಸಮಸ್ಯೆಯಿಂದ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ತಾಯಿಗೂ ಸೋಂಕು ದೃಢಪಟ್ಟಿತ್ತು. ಹಿರೇಕೆರೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆದು, ತಾಯಿಗೂ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೆಲವೇ ಗಂಟೆಗಳ ಅಂತರದಲ್ಲಿ ತಾಯಿ ಮತ್ತು ಮಗ ಇಬ್ಬರೂ ಮೃತಪಟ್ಟಿದ್ದಾರೆ. ಇದನ್ನೂ ಓದಿ. ಶತಾಯುಷಿ ಇಚ್ಚಂಗಿಯ ಶಿವಾನಂದ ಮಠದ ಶರಣಮ್ಮ ಲಿಂಗೈಕ್ಯ
ಮೇ 28ರ ತಡರಾತ್ರಿ ನಾಗರಾಜ್ ಅವರು ಮೃತಪಟ್ಟರೆ ಬೆಳಗ್ಗಿನ ಜಾವ ಲಲಿತವ್ವ ಮೃತಪಟ್ಟಿದ್ದಾರೆ. ಐದು ಜನ ಸದಸ್ಯರಿದ್ದ ಕುಟುಂಬದಲ್ಲಿ ತಾಯಿ ಮತ್ತು ಮಗ ಸಾವನ್ನಪ್ಪಿದ್ದು, ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ.