ಶಿವಮೊಗ್ಗ: ಮೈಸೂರು ದಿವಾನರಾಗಿದ್ದ ದಿವಂಗತ ಸರ್ ಎಂ.ವಿಶ್ವೇಶ್ವರಯ್ಯ ಅವರು ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಸ್ಥಾಪಿಸಿದ್ದ ಮೈಸೂರು ಪೇಪರ್ ಮಿಲ್ ಹಲವು ಕಾರಣಗಳಿಂದ ಸ್ಥಗಿತಗೊಂಡಿತ್ತು. ಕಾರ್ಖಾನೆ ಸ್ಥಗಿತಗೊಂಡಿದ್ದರಿಂದ ಸಾವಿರಾರು ಮಂದಿ ಕಾರ್ಮಿಕರು ಅತಂತ್ರರಾಗಿದ್ದರು. ಸರ್ಕಾರ ಕೂಡ ಈ ಹಿಂದೆ ಕಾರ್ಖಾನೆಗೆ ಮರುಜೀವ ನೀಡಲು ಹಲವು ಬಾರಿ ಪ್ರಯತ್ನ ನಡೆಸಿತ್ತು. ಕಾರ್ಖಾನೆ ಆರಂಭಿಸುವಂತೆ ಕಾರ್ಮಿಕರು ಸಹ ಹಲವು ಬಾರಿ ಸರಕಾರಕ್ಕೆ ಮನವಿ ಮಾಡಿದ್ದರು. ಆದರೂ ಕಾರ್ಖಾನೆ ಪುನರ್ ಆರಂಭವಾಗಲೇ ಇಲ್ಲ.
Advertisement
ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಕಾರ್ಮಿಕರ ಮನವಿ ಮೇರೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಇಂದು ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಗೂ ಇದೇ ವೇಳೆ ಜಿಲ್ಲೆಯ ಜನಪ್ರತಿನಿಧಿಗಳು, ಕಾರ್ಖಾನೆಯ ಎಂಡಿ ಹಾಗೂ ಕಾರ್ಮಿಕ ಮುಖಂಡರ ಜೊತೆ ಕಾರ್ಖಾನೆ ಆರಂಭ ಮಾಡುವ ಕುರಿತು ಚರ್ಚೆ ನಡೆಸಿದರು.
Advertisement
ಬಳಿಕ ಮಾತನಾಡಿದ ಸಚಿವರು ಈಗಾಗಲೇ ಸರ್ಕಾರ ಕಾರ್ಖಾನೆ ಆರಂಭ ಮಾಡುವ ಬಗ್ಗೆ ಸಾಕಷ್ಟು ಪ್ರಯತ್ನ ನಡೆಸಿದೆ. ಜೊತೆಗೆ ಕೋಟ್ಯಾಂತರ ರೂಪಾಯಿ ನಷ್ಟ ಸಹ ಅನುಭವಿಸಿದೆ. ಈಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಖಾನೆ ಆರಂಭಿಸುವ ಬಗ್ಗೆ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆದಿದೆ. ಅಲ್ಲದೇ ಕಾರ್ಖಾನೆ ಆರಂಭಿಸುವ ಸಲುವಾಗಿ ಖಾಸಗಿ ಬಂಡವಾಳಗಾರರನ್ನು ಸಹ ಆಕರ್ಷಿಸುವ ಪ್ರಯತ್ನ ನಡೆದಿದೆ. ಈಗಾಗಲೇ ಹಲವು ಖಾಸಗಿ ಬಂಡವಾಳಗಾರರೊಂದಿಗೆ ಮಾತುಕತೆಯನ್ನು ಆರಂಭಿಸಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.