– ಮನನೊಂದ ಉಪನ್ಯಾಸಕಿ ನೇಣಿಗೆ ಶರಣು
ಶಿವಮೊಗ್ಗ: ಖಾಸಗಿ ಕಾಲೇಜಿನ ಉಪನ್ಯಾಸಕಿಗೆ ಮದುವೆಯಾಗುವಂತೆ ಯುವಕನೋರ್ವ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಇದರಿಂದ ಮನನೊಂದ ಉಪನ್ಯಾಸಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮೃತಪಟ್ಟ ಯುವತಿಯನ್ನು ಶಿವಮೊಗ್ಗದ ಗಾಂಧಿ ಬಜಾರಿನ ತಿಗಳರ ಕೇರಿಯ ಸ್ವಾತಿ (26) ಎಂದು ಗುರುತಿಸಲಾಗಿದೆ. ಮೃತ ಸ್ವಾತಿ ಕಳೆದ ಐದು ವರ್ಷದಿಂದ ಪೆಸಿಟ್ ಪದವಿ ಕಾಲೇಜಿನಲ್ಲಿ ಕಾಮರ್ಸ್ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಖಾಸಗಿ ಕಾಲೇಜಿನ ಉಪನ್ಯಾಸಕಿಯಾಗಿದ್ದ ಸ್ವಾತಿಗೆ ಕಳೆದ ತಿಂಗಳು ಬೇರೊಬ್ಬ ಯುವಕನ ಜೊತೆ ಮದುವೆ ನಿಶ್ಚಯವಾಗಿತ್ತು. ಆದರೂ ತನ್ನನ್ನು ಮದುವೆಯಾಗುವಂತೆ ಗಾಂಧಿಬಜಾರಿನ ಧರ್ಮರಾಯನ ಕೇರಿಯ ಮಲ್ಲ ಎಂಬ ಯುವಕ ಪೀಡಿಸುತ್ತಿದ್ದ ಎನ್ನಲಾಗಿದೆ.
ಯುವಕನ ಕಿರುಕುಳಕ್ಕೆ ಬೇಸತ್ತ ಯುವತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಘಟನೆ ಕುರಿತು ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.