– ಮತ್ತೆ ಲಾಕ್‍ಡೌನ್ ವಿಸ್ತರಣೆಯ ಬಗ್ಗೆ ಸ್ಪಷ್ಟನೆ
ಬೆಂಗಳೂರು: ಸರ್ಕಾರದ ಆದೇಶಕ್ಕೆ ಖಾಸಗಿ ಆಸ್ಪತ್ರೆಗಳು ಸಹಕಾರ ಕೊಡದಿದ್ದರೆ ಇಡೀ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿಗಣಿಸುತ್ತೇವೆ ಎಂದು ಬೆಂಗಳೂರು ದಕ್ಷಿಣ ವಲಯ ಉಸ್ತುವಾರಿ ಸಚಿವ ಆರ್.ಅಶೋಕ್ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವ ಆರ್.ಅಶೋಕ್, ದಕ್ಷಿಣ ವಲಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. ಈ ಹಿಂದೆ ಬಿಬಿಎಂಪಿಯೇ ಎಲ್ಲವನ್ನು ನಿರ್ವಹಿಸುತ್ತಿತ್ತು. ಉಸ್ತುವಾರಿ ಹಂಚಿಕೆ ಬಳಿಕ ಕಾರ್ಪೊರೇಟರ್‌ಗಳಿಗೆ ಹೊಣೆಗಾರಿಕೆ ಕೊಟ್ಟಿದ್ದೇವೆ. ನಮ್ಮ ವಲಯದಲ್ಲಿ ಖಾಸಗಿ ಆಸ್ಪತ್ರೆಗಳನ್ನು ದಾರಿಗೆ ತಂದಿದ್ದೇವೆ. ಪ್ರತಿ ಖಾಸಗಿ ಆಸ್ಪತ್ರೆಗಳ ಎದುರು ಇನ್ಮುಂದೆ ಸಬ್ ಇನ್ಸ್‌ಪೆಕ್ಟರ್ ನೇಮಕ ಮಾಡಿದ್ದೇವೆ ಎಂದರು.
Advertisement
Advertisement
ಖಾಸಗಿ ಆಸ್ಪತ್ರೆಗಳಲ್ಲಿ ಯಾರೇ ಬಂದರೂ ಚಿಕಿತ್ಸೆ ಕೊಡಬೇಕು. ಒಂದು ವೇಳೆ ಅವರು ಚಿಕಿತ್ಸೆ ಕೊಡಲು ನಿರಾಕರಿಸಿದರೆ ತಕ್ಷಣ ಡಿಸಿಪಿಗೆ ಅಲ್ಲಿಂದ ಮೆಸೇಜ್ ಬರಬೇಕು. ನಂತರ ಡಿಸಿಪಿ ಆಸ್ಪತ್ರೆಗೆ ಹೋಗಿ ಪರಿಶೀಲನೆ ನಡೆಸುತ್ತಾರೆ. ಸರ್ಕಾರದ ಆದೇಶಕ್ಕೆ ಖಾಸಗಿ ಆಸ್ಪತ್ರೆಗಳು ಸಹಕಾರ ಕೊಡದಿದ್ದರೆ ಇಡೀ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿಗಣಿಸುತ್ತೇವೆ ಎಂದು ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದರು.
Advertisement
ಬೆಂಗಳೂರಿನಲ್ಲಿ ಲಾಕ್‍ಡೌನ್ ವಿಸ್ತರಣೆ ವಿಚಾರವಾಗಿ ಮಾತನಾಡಿದ ಸಚಿವರು, ಲಾಕ್‍ಡೌನ್ ವಿಸ್ತರಣೆ ಇಲ್ಲ. ಇವತ್ತಿನ ಸಿಎಂ ಸಭೆಯಲ್ಲೂ ಲಾಕ್‍ಡೌನ್ ವಿಸ್ತರಣೆ ಬಗ್ಗೆ ಚರ್ಚೆ ಆಗಲ್ಲ. ಲಾಕ್‍ಡೌನ್ ಮುಗಿದ ಮೇಲೆ ಏನು ಮಾಡಬೇಕು ಎಂಬುದನ್ನು ಚರ್ಚೆ ಮಾಡುತ್ತೇವೆ. ಸದ್ಯಕ್ಕೆ ಕೊರೊನಾದಿಂದ ಸಾಯುತ್ತಿರುವ ಸಂಖ್ಯೆಯನ್ನು ಕಡಿಮೆ ಮಾಡಬೇಕು. ಹೀಗಾಗಿ ಲಾಕ್‍ಡೌನ್ ವಿಸ್ತರಣೆ ಮಾಡುವ ಪ್ರಮೇಯ ಇಲ್ಲ ಅಂತ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
Advertisement
ವಲಯವಾರು ಕೊರೊನಾ ನಿಯಂತ್ರಣ ವಿಚಾರದಲ್ಲಿ ಸಿಎಂಗೆ ಅತೃಪ್ತಿ ಇಲ್ಲ. ಬೆಂಗಳೂರು ಸೇರಿ ಎಲ್ಲ ಕಡೆ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಕೊರೊನಾ ಗರಿಷ್ಠ ಮಟ್ಟಗೆ ಹೋಗಿ ಕಡಿಮೆ ಆಗಬೇಕು. ಸೋಂಕು ಪ್ರಮಾಣವನ್ನು ತಡೆಯುವುದಕ್ಕೆ ಆಗದಿದ್ದರೂ ಸಾವಿನ ಪ್ರಮಾಣ ಕಮ್ಮಿ ಮಾಡುವುದು ನಮ್ಮ ಆದ್ಯತೆ. ವಿಶ್ವದಲ್ಲೆಲ್ಲೂ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಗರಿಷ್ಠ ಮಟ್ಟಕ್ಕೆ ಹೋಗಿ ಕಮ್ಮಿಯಾಗುತ್ತೆ ಎಂದರು.
ಇವತ್ತಿನ ಸಿಎಂ ಸಭೆಯಲ್ಲಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ಚರ್ಚೆ ಮಾಡುತ್ತೇವೆ. ರಾಜ್ಯದಲ್ಲಿ ಕೊರೊನಾ ನಿರ್ವಹಣೆ ವಿಚಾರದಲ್ಲಿ ವಿಫಲವಾಗಿಲ್ಲ. ಈ ಬಗ್ಗೆ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಬೆಂಗಳೂರಿನಲ್ಲಿ ಸಚಿವರ ನಡುವೆ ಸಮನ್ವಯತೆ ಇಲ್ಲ ಅನ್ನೋದು ಸುಳ್ಳು ಎಂದರು.
ಇನ್ನೂ ಕಲಬುರಗಿಯಲ್ಲಿ ಲಾಕ್‍ಡೌನ್ ವಿಸ್ತರಣೆಯ ಬಗ್ಗೆ ಮಾತನಾಡಿ, ಕಲಬುರಗಿಯಲ್ಲಿ ಡಿಸಿಗೆ ಸಿಎಂ ಅಧಿಕಾರ ಕೊಟ್ಟಿದ್ದರು. ಅದರಂತೆಯೇ ಅವರು ಲಾಕ್‍ಡೌನ್ ವಿಸ್ತರಿಸಿದ್ದಾರೆ. ಎಲ್ಲಾ ಜಿಲ್ಲೆಗಳ ಡಿಸಿಗಳಿಗೂ ನಿರ್ಧಾರ ಕೈತೆಗೆದುಕೊಳ್ಳುವ ಅಧಿಕಾರ ಇದೆ. ಆದರೆ ಬೆಂಗಳೂರಿನಲ್ಲಿ ಲಾಕ್‍ಡೌನ್ ವಿಸ್ತರಣೆ ಮಾಡಲ್ಲ. ಅಂತಹ ಸಂದರ್ಭವೂ ಇಲ್ಲ ಎಂದು ಆರ್.ಅಶೋಕ್ ಮತ್ತೊಮ್ಮೆ ಸ್ಪಷ್ಟಪಡಿಸಿದರು.