– 9 ದಿನದಲ್ಲಿ 3ನೇ ಬಾರಿ ಅದಲು-ಬದಲು!
ಬೆಂಗಳೂರು: ಖಾತೆ ಮರು ಹಂಚಿಕೆ ಅಸಮಾಧಾನಕ್ಕೆ ಮತ್ತೆ ಮುಲಾಮು ಹಚ್ಚಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸಚಿವ ಮಾಧುಸ್ವಾಮಿ ಅವರಿಗೆ ನೀಡಲಾಗಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ವಾಪಸ್ ಪಡೆದು, ಪ್ರವಾಸೋದ್ಯಮ ಖಾತೆಯನ್ನ ನೀಡಲಾಗ್ತಿದೆ ಎಂದು ತಿಳಿದು ಬಂದಿದೆ. ಆನಂದ್ ಸಿಂಗ್ ಗೆ ಪರಿಸರ ಇಲಾಖೆ ಬದಲಾಗಿ ಹಜ್ ಮತ್ತು ವಕ್ಫ್ ಇಲಾಖೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ನೀಡಲು ಸಿಎಂ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಚಿವ ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ವಾಪಸ್ ನೀಡುವ ಸಾಧ್ಯತೆಗಳಿವೆ.
ಸರ್ಕಾರ ಖಾತೆಯ ಅದಲು-ಬದಲು ಮಾಡಿರುವ ಪಟ್ಟಿಯನ್ನ ರಾಜಭವನಕ್ಕೆ ರವಾನಿಸಲಾಗಿದೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಖಾತೆ ಹಂಚಿಕೆಯ ಪಟ್ಟಿ ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆಗಳಿವೆ. ಸಚಿವರ ಒತ್ತಡಕ್ಕೆ ಮಣಿದು ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನೋ ಚರ್ಚೆಗಳು ಕಮಲ ಪಾಳಯದಲ್ಲಿ ಗರಿಗೆದರಿವೆ.
ಖಾತೆ ಮುಲಾಮುಗೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವ ಮಾಧುಸ್ವಾಮಿ, ನನಗೆ ಅಸಮಾಧಾನ ಇದೆ ಅಂತ ಯಾರ ಬಳಿಯೂ ಹೇಳಿಲ್ಲ. ನಾಳೆಯ ಪರೇಡ್ ಮುಗಿಯುವರೆಗೂ ಖಾತೆ ಬದಲಾವಣಗೆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಖಾತೆ ನೀಡಿ ಅಂತ ನಾನು ಯಾರ ಬಳಿಯೂ ಕೇಳಿಕೊಂಡಿರಲಿಲ್ಲ ಎಂದು ಹೇಳಿದರು.