ಬೆಂಗಳೂರು: ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಆಗಾಗ್ಗೆ ಬಹಿರಂಗ ಆಗ್ತಾಯಿದೆ. ಶಾಸನ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ಸಿಎಂ ಬದಲಾವಣೆಯ ಮಾತುಗಳನ್ನಾಡುವ ಮೂಲಕ ಹೊಸ ಹೊಸ ರಾಜಕಾರಣದ ಚರ್ಚೆಗಳಿಗೆ ನಾಂದಿ ಹಾಡುತ್ತಿದ್ದಾರೆ. ಇದೀಗ ಸಿಎಂ ಯಡಿಯೂರಪ್ಪ ವಿರುದ್ಧವೇ ಬಿಜೆಪಿಯ ನಿಷ್ಠರು ಹೊಸ ಪಂಚಸೂತ್ರ ಹಣೆದಿದ್ದು, ಈ ಬಗ್ಗೆ ಹೈಕಮಾಂಡ್ ಗೆ ದೂರು ನೀಡಲು ಪ್ರಯತ್ನಿಸುತ್ತಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸರ್ಕಾರದ ಆಡಳಿತದ ಮೇಲಿನ ಯಡಿಯೂರಪ್ಪನವರ ಹಿಡಿತಗೊಳಿಸಲು ಬಿಜೆಪಿಯ ಮೂವತ್ತು ನಾಯಕರು ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸರ್ಕಾರದ ಆಡಳಿತ ಹೇಗಿರಬೇಕು ಅನ್ನೋದರ ಕುರಿತು 30 ನಾಯಕರ ತಂಡ ಬ್ಲ್ಯೂ ಪ್ರಿಂಟ್ ಸಿದ್ಧಪಡಿಸಿದೆ. ಇದೇ ರೀತಿ ಆಡಳಿತ ನಡೆದ್ರೆ ಸರ್ಕಾರದ ಜೊತೆಗೆ ಪಕ್ಷಕ್ಕೂ ಒಳ್ಳೆಯದು ಎಂಬ ಸಂದೇಶವನ್ನ ಹೈಕಮಾಂಡ್ ಗೆ ತಲುಪಿಸಲು ಕಮಲ ಪಾಳಯದಲ್ಲಿ ಸಿದ್ಧತೆ ನಡೆದಿದೆ ಎಂದು ತಿಳಿದು ಬಂದಿದೆ.
ಬಿಎಸ್‍ವೈ ಆಡಳಿತಕ್ಕೆ ನಿಷ್ಠರ ಪಂಚಸೂತ್ರ
ಪಂಚಸೂತ್ರ 1: ಯಡಿಯೂರಪ್ಪ ಅಥವಾ ವಿಜಯೇಂದ್ರ ಕೇಂದ್ರೀತ ಸರ್ಕಾರ ಆಗಬಾರದು, ಬಿಜೆಪಿ ಸರ್ಕಾರ ಆಗಿರಬೇಕು.
ಪಂಚಸೂತ್ರ 2: ಬಿಎಸ್‍ವೈ ಕುಟುಂಬದ ಪ್ರತಿ ಸದಸ್ಯರನ್ನು ಆಡಳಿತ, ಸರ್ಕಾರದ ನಿರ್ಧಾರಗಳಿಂದ ದೂರ ಇಡಬೇಕು.
ಪಂಚಸೂತ್ರ 3: ಜಾತಿ ಕೇಂದ್ರೀತ ಸರ್ಕಾರ ಎಂದು ಬಿಂಬಿಸಿಕೊಳ್ಳದೇ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವಂತಾಗಬೇಕು.
ಪಂಚಸೂತ್ರ 4: ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತನಿಗೂ ಸರ್ಕಾರದ ಸೌಲಭ್ಯ, ಅನುಕೂಲ ಸಿಗುವಂತೆ ನೋಡಿಕೊಳ್ಳಬೇಕು.
ಪಂಚಸೂತ್ರ 5: ಸರ್ಕಾರ ಪರ್ಸೆಂಟೇಜ್ ಹಾವಳಿಗೆ ಬ್ರೇಕ್ ಹಾಕಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು.
ನಮಗಾಗಿ ಏನು ಬೇಡ. ಕಾರ್ಯಕರ್ತರು ಮತ್ತು ಪಕ್ಷಕ್ಕಾಗಿ ಹೈಕಮಾಂಡ್ ಪಂಚಸೂತ್ರ ಜಾರಿಗೆ ಮುಂದಾಗಬೇಕಿದೆ ಅನ್ನೋದು ಬಿಜೆಪಿ ನಿಷ್ಠರ ಅಜೆಂಡಾ ಎನ್ನಲಾಗಿದೆ. ಒಂದು ಕಡೆ ಸಚಿವ ಸ್ಥಾನ ಸಿಗದೇ ಅತೃಪ್ತರ ಚಿಂತೆ ಒಂದೆಡೆಯಾದ್ರೆ, ಪಕ್ಷದ ನಿಷ್ಠರೇ ತಮ್ಮ ವಿರುದ್ಧ ಹೈಕಮಾಂಡ್ ಗೆ ದೂರು ನೀಡಲು ಮುಂದಾಗಿರುವ ವಿಷಯ ತಿಳಿದು ಸಿಎಂ ಫುಲ್ ಟೆನ್ಷನ್ ನಲ್ಲಿದ್ದಾರೆ ಎಂದು ಹೇಳಲಾಗ್ತಿದೆ.