ಚಿಕ್ಕಮಗಳೂರು: ಖಾತೆಯ ಕ್ಯಾತೆ ಮುಗಿದ ಅಧ್ಯಾಯ. ನೋ ಖಾತೆಯ ಕ್ಯಾತೆ. ಅದೆಲ್ಲಾ ಮುಗಿದ ಅಧ್ಯಾಯ. ನಿನ್ನೆಯೇ ಎಲ್ಲಾ ಮುಗಿದಿದೆ. ಇಡೀ ಮಂತ್ರಿಮಂಡಲದ ಎಲ್ಲಾ ಸದಸ್ಯರು ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಇದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆಯುತ್ತಿರುವ ಜನಸೇವಕ ಸಮಾವೇಶ ಹಾಗೂ ಶೃಂಗೇರಿಯಲ್ಲಿ ಅಕ್ಷರ ಮಿತ್ರ ಕಾರ್ಯಕ್ರಮದ ನಿಮಿತ್ತ ಜಿಲ್ಲೆಗೆ ಆಗಮಿಸಿದ್ದ ಅವರು, ಕೊಪ್ಪಾಗೆ ತೆರಳುವ ಮುನ್ನ ಜಿಲ್ಲಾ ಕೇಂದ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿzರು, ನಾನು ಮೊನ್ನೆಯೇ ಗೋಪಾಲಯ್ಯ, ಎಂ.ಟಿ.ಬಿ.ನಾಗರಾಜ್, ಶಂಕರ್ ಹಾಗೂ ಸುಧಾಕರ್ ಅವರನ್ನ ಕರೆಸಿ ಮಾತನಾಡಿದ್ದೇನೆ. ನಾನು ಬಸವರಾಜ್ ಬೊಮ್ಮಾಯಿ ಎಲ್ಲರ ಜೊತೆ ಮಾತನಾಡಿದ್ದೇವೆ. ಯಾರ್ಯಾರಿಗೆ ಬೇಸರವಿತ್ತೋ ಅವರನ್ನೆಲ್ಲಾ ಕರೆದು ಮಾತನಾಡಿದ್ದೇವೆ. ಖಾತೆಯ ಮರು ಹಂಚಿಕೆಯಾಗಿದೆ. ಈಗ ಎಲ್ಲಾ ಸಮಾಧಾನವಾಗಿ, ಶಾಂತವಾಗಿ ಇದ್ದಾರೆ. ಯಾವುದೇ ರೀತಿಯ ಗೊಂದಲ ಇಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ಯಾರು ಆಗಬೇಕೆಂದು ಬಾಕಿ ಇದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಜಿಲ್ಲಾ ಉಸ್ತುವಾರಿ ಸಚಿವರನ್ನ ಅನೌನ್ಸ್ ಮಾಡುತ್ತಾರೆ. ಎಲ್ಲಾ ತಣ್ಣಗಾಗಿದೆ. ಶಾಂತವಾಗಿದೆ. ರೆಸಾರ್ಟ್ ಯಾರ್ಯಾರೋ ಬಂದಿದ್ದರು ಅಂತ ಹೇಳಿದ್ದೀರಾ. ಯಾರ್ಯೋರು ಬಂದಿರಲಿಲ್ಲ. ಅವರಿಬ್ಬರು ಸ್ನೇಹಿತರು ಯಾವುದೋ ಕಾರಣಕ್ಕೆ ಬಂದಿರಬಹುದು ಎಂದು ಅಸಮಾಧಾನಿಕರ ಗುಪ್ತ್ ಸಭೆಗೆ ಕಂದಾಯ ಸಚಿವ ಆರ್.ಅಶೋಕ್ ಪ್ಲಾಸ್ಟರ್ ಹಾಕಿದ್ದಾರೆ.
ಇದೇ ವೇಳೆ ಶಿವಮೊಗ್ಗದ ಹುನಗೋಡುವಿನಲ್ಲಿ ನಡೆದ ಜಿಲೆಟಿನ್ ಕಡ್ಡಿಗಳ ಸ್ಫೋಟದ ಸಂಬಂಧ ಮಾತನಾಡಿದ ಅವರು, ಶಿವಮೊಗ್ಗದ ಮಾಜಿ ಶಾಸಕ ಪ್ರಸನ್ನ ಕುಮಾರ್ ಪ್ರಕರಣವನ್ನ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ್ದರು. ಈ ಪ್ರಕರಣ ಸಿಬಿಐಗೆ ವಹಿಸುವಂತದ್ದಲ್ಲ. ನಮ್ಮ ಪೊಲೀಸರೇ ಸಮರ್ಥರಿದ್ದಾರೆ. ನಮ್ಮ ಪೊಲೀಸರೇ ಸೂಕ್ತ ತನಿಖೆ ನಡೆಸಲಿದ್ದಾರೆ ಎಂದು ಹೇಳಿದರು.