ಬೆಂಗಳೂರು: ಸರ್ಕಾರಿ ಕಚೇರಿಗೆ ತಮ್ಮ ಮನೆಯ ಖಾತೆ ಮಾಡಿಸಿಕೊಳ್ಳಲು ಅಲೆದು ಅಲೆದು ಸುಸ್ತಾಗಿ ಬೇರೆ ದಾರಿಯಿಲ್ಲದೆ, 68 ವರ್ಷದ ವ್ಯಕ್ತಿಯೊಬ್ಬರು ಒಬ್ಬಂಟಿಯಾಗಿ ಪ್ರತಿಭಟನೆ ಮಾಡಿರುವ ಘಟನೆ ಬೆಂಗಳೂರು ಪೂರ್ವ ತಾಲೂಕಿನ ಕೆಆರ್ ಪುರಂ ತಾಲೂಕು ಕಚೇರಿ ಮುಂದೆ ನಡೆದಿದೆ.
ಮಾರತಳ್ಳಿ ಸಮೀಪದ ಪಣತೂರ್ ಗ್ರಾಮದ ನಿವಾಸಿ ಶ್ರೀಲೋಕ ಮೂರ್ತಿ ಕಳೆದ ನಾಲ್ಕು ತಿಂಗಳಿಂದ ತಮ್ಮ ಮನೆ ಖಾತೆ ಮಾಡಿಕೊಡಲು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕರೋನಾ ಸಮಯದಲ್ಲಿ ಪ್ರತಿದಿನ ಕಚೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಇವತ್ತು ಒಬ್ಬಂಟಿಯಾಗಿ ಬೋರ್ಡ್ ಹಿಡಿದು ಪ್ರತಿಭಟನೆ ಮಾಡುತ್ತಿದ್ದಂತೆ ಸ್ಥಳಕ್ಕೆ ಬಂದ ತಹಸೀಲ್ದಾರ್ ಅವರ ದಾಖಲಾತಿ ಪರಿಶೀಲನೆ ತರಾತುರಿಯಲ್ಲಿ ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೆ ಅವರು ನೀಡಿದ ದಾಖಲಾತಿಗಳು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಲೋಕ ಮೂರ್ತಿ ಆಗ್ರಹಪಡಿಸಿದ್ದಾರೆ.