ಬೆಂಗಳೂರು: ತಮ್ಮನ್ನು ಭೇಟಿಯಾಗಲು ವಿರಾಜಪೇಟೆಗೆ ಬಂದಿದ್ದ ಅಭಿಮಾನಿಗೆ ನಟಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸಂದೇಶ ರವಾನಿಸಿದ್ದಾರೆ. ಕಳೆದ ವಾರ ತೆಲಂಗಾಣ ಮೂಲದ ಆಕಾಶ್ ತ್ರಿಪಾಠಿ ಎಂಬವರು ವಿರಾಜಪೇಟೆಗೆ ಬಂದು ಪೇಚಿಗೆ ಸಿಲುಕಿಕೊಂಡಿದ್ದರು. ಸದ್ಯ ಈ ವಿಷಯದ ಕುರಿತು ಪ್ರತಿಕ್ರಿಯಿಸಿರುವ ರಶ್ಮಿಕಾ ಮಂದಣ್ಣ, ತಮ್ಮ ಅಭಿಮಾನಿಗಳಿಗೆ ಟ್ವೀಟ್ ಮೂಲಕ ಸಂದೇಶ ಕಳುಹಿಸಿದ್ದಾರೆ.
ಅಭಿಮಾನಿಗಳಲ್ಲಿ ಒಬ್ಬರು ನನ್ನನ್ನು ಭೇಟಿಯಾಗಲು ವಿರಾಜಪೇಟೆಯಲ್ಲಿರುವ ನನ್ನ ಮನೆವರೆಗೂ ಹೋಗಿರುವ ವಿಷಯ ತಿಳಿಯಿತು. ದಯವಿಟ್ಟು ಈ ರೀತಿ ಮಾಡಬೇಡಿ. ನಿಮ್ಮನ್ನು ಭೇಟಿಯಾಗದಿದ್ದಕ್ಕೆ ನನಗೂ ಬೇಸರವಿದೆ. ಒಂದು ದಿನ ಖಂಡಿತಾ ನಿಮ್ಮನ್ನು ಭೇಟಿಯಾಗುತ್ತೇನೆ. ನಿಮ್ಮ ಈ ಪ್ರೀತಿ ಕಂಡು ನಾನು ಖುಷಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಏನಿದು ಘಟನೆ?:
ತೆಲಂಗಾಣದಿಂದ ಮೈಸೂರಿನವರೆಗೆ ರೈಲಿನಲ್ಲಿ ಬಂದಿದ್ದ ಆಕಾಶ್, ಬಳಿಕ ವಿರಾಜಪೇಟೆಗೆ ತರಕಾರಿ ತೆಗೆದುಕೊಂಡು ಹೋಗುವ ಗೂಡ್ಸ್ ಆಟೋದಲ್ಲಿ ವಿರಾಜಪೇಟೆ ತಲುಪಿದ್ದರು. ಅಲ್ಲಿಂದ ವಿರಾಜಪೇಟೆ ನಗರದಿಂದ ಗೂಗಲ್ ಮ್ಯಾಪ್ ಹಾಕಿಕೊಂಡು ಮಗ್ಗುಲ ಗ್ರಾಮದಲ್ಲಿ ಮಂದಣ್ಣ ಎಂಬವರಿಗೆ ಸೇರಿದ ಜಾಗ ಇದ್ದು, ಇಲ್ಲೇ ರಶ್ಮಿಕಾ ಮಂದಣ್ಣ ಮನೆ ಇರಬೇಕು ಅಂದುಕೊಂಡು ಆಟೋದಲ್ಲಿ ಗ್ರಾಮಕ್ಕೆ ಬಂದಿಳಿದಿದ್ದಾರೆ. ನಂತರ ಅಕ್ಕಪಕ್ಕದ ಜನರ ಬಳಿ ರಶ್ಮಿಕಾ ಮಂದಣ್ಣ ಮನೆ ಎಲ್ಲಿ ಎಂದು ವಿಚಾರಿಸಿ ಹುಡುಕಾಟ ನಡೆಸಿದ್ದರು. ಇದನ್ನೂ ಓದಿ: ಸಾಧನೆ ಮಾಡಲು ಹೊರಡುವ ಯುವತಿ ಚಿಕ್ಕ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಲ್ಲ: ರಶ್ಮಿಕಾ ಮಂದಣ್ಣ
ಆಕಾಶ್ ನಡವಳಿಕೆ ಕಂಡ ಮಗ್ಗುಲ ಗ್ರಾಮಸ್ಥರು ವಿರಾಜಪೇಟೆ ಪೊಲೀಸರಿಗೆ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಆತನನ್ನು ವಿಚಾರಿಸಿದಾಗ ಇಂಗ್ಲಿಷ್‍ನಲ್ಲಿ ಮಾತನಾಡಿದ್ದಾರೆ. ಅಲ್ಲದೆ ನಾನು ಈಗಲೇ ರಶ್ಮಿಕಾ ಮಂದಣ್ಣನನ್ನು ಭೇಟಿಯಾಗಬೇಕೆಂದು ಬಂದಿದ್ದೇನೆ. ನಾನು ಅವರ ಅಪ್ಪಟ ಅಭಿಮಾನಿ ಎಂದು ತಿಳಿಸಿದ್ದರು. ಪೊಲೀಸರು ಆಕಾಶ್ ವಿಚಾರಣೆ ನಡೆಸಿ ಕೊರೋನಾ ಸಂದರ್ಭದಲ್ಲಿ ಹೀಗೆಲ್ಲ ಬರಬಾರದು ಎಂದು ಎಚ್ಚರಿಕೆ ನೀಡಿ ತೆಲಂಗಾಣಕ್ಕೆ ವಾಪಸ್ ಕಳುಹಿಸಿದ್ದರು. ಇದನ್ನೂ ಓದಿ: ರಶ್ಮಿಕಾ ಬಗ್ಗೆ ಕಮೆಂಟ್ ಮಾಡಿದವರ ಚಳಿ ಬಿಡಿಸಿದ ರಕ್ಷಿತ್ ಶೆಟ್ಟಿ