ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಭೇಟಿ, ಜಾಗೃತಿ : ಸೋಮಶೇಖರ್

Public TV
4 Min Read
st somashekar 2 e1621954202621

– ಆಶಾ, ಅಂಗನವಾಡಿ ಕಾರ್ಯಕರ್ತೆಯರ ಪರ ನಾನಿದ್ದೇನೆ
– ಕಗ್ಗಲಿಪುರ ಸಮೀಪ ಶೀಘ್ರದಲ್ಲಿ ಕೋವಿಡ್ ಕೇರ್ ಸೆಂಟರ್, ಟ್ರಯಾಜ್ ಸೆಂಟರ್

ಬೆಂಗಳೂರು: ಮುಂದಿನ 2 ವಾರದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಭೇಟಿ ನೀಡುತ್ತೇನೆ. ಆರೋಗ್ಯಾಧಿಕಾರಿಗಳನ್ನೊಳಗೊಂಡ ಟಾಸ್ಕ್ ಫೋರ್ಸ್  ಜೊತೆ ಹೋಗಿ ಆರೋಗ್ಯ ವಿಚಾರಿಸುವ ಹಾಗೂ ಜನತೆಗೆ ಧೈರ್ಯ ತುಂಬವ ಕೆಲಸವನ್ನು ಮಾಡಲಿದ್ದೇನೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಹೇಳಿದರು.

ತರಳು, ನೆಲಗುಳಿ, ಸೋಮನಹಳ್ಳಿ, ಕಗ್ಗಲಿಪುರ ಮತ್ತು ಅಗರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ಗ್ರಾಮ ಪಂಚಾಯಿತಿಗಳ ಕೋವಿಡ್ – 19 ನಿರ್ವಹಣೆಗಾಗಿ ರಚಿಸಲಾಗಿರುವ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಮತ್ತು ಗ್ರಾಮ ಮಟ್ಟದ ಕಾರ್ಯಪಡೆಗಳ ಸದಸ್ಯರ ಸಭೆಯಲ್ಲಿ ಮಾತನಾಡಿದ ಸಚಿವರು, ಕೋವಿಡ್ 2ನೇ ಅಲೆ ಭೀಕರವಾಗಿರುವ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಜೊತೆಗೆ ಕೋವಿಡ್ ಬಗ್ಗೆ ಧೈರ್ಯವನ್ನು ಹೇಳಬೇಕಿದೆ. ಈ ಹಿನ್ನೆಲೆಯಲ್ಲಿ ನಾನೇ ಖುದ್ದಾಗಿ ಭೇಟಿ ನೀಡಿ ಜನರ ಯೋಗಕ್ಷೇಮವನ್ನು ವಿಚಾರಿಸುತ್ತೇನೆ. ಅಗತ್ಯವಿದ್ದವರಿಗೆ ನೆರವು ನೀಡುತ್ತೇನೆ ಎಂದು ತಿಳಿಸಿದರು.

ಕೋವಿಡ್ ವಾರಿಯರ್ಸ್ ಗಳಾಗಿ ಮುಂದೆ ನಿಂತು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಯಾವುದೇ ಕಾರಣಕ್ಕೂ ಧೈರ್ಯವನ್ನು ಕಳೆದುಕೊಳ್ಳುವುದು ಬೇಡ. ನಿಮ್ಮ ಪರವಾಗಿ ನಾನು ಸದಾ ಇದ್ದೇನೆ. ನಿಮಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗದಂತೆ ಅಗತ್ಯ ಸೌಲಭ್ಯ, ವ್ಯವಸ್ಥೆ ಮಾಡುತ್ತೇನೆ ಎಂದು ಸಚಿವರು ಅಭಯ ನೀಡಿದರು.

st somashekar 1

ಕೋವಿಡ್ 19 ಇಡೀ ವಿಶ್ವಕ್ಕೇ ವ್ಯಾಪಿಸಿದೆ. ಸೋಂಕು ತಗುಲಿದರೆ ಯಾವುದೇ ಹಿಂಜರಿಕೆ ಇಲ್ಲದೇ ಹೇಳಿಕೊಂಡು ಚಿಕಿತ್ಸೆ ಪಡೆದು ಗುಣಮುಖರಾಗಬೇಕು. ನಮ್ಮ ಕ್ಷೇತ್ರದಲ್ಲಿ ಈವರೆಗೆ ಸುಮಾರು 7500ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಅವರಲ್ಲಿ 6500 ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆದರೆ, ನಮಗೆ ಜ್ವರ ಬಂದರೆ ಕಷಾಯ ಕುಡಿದರೆ ಹೋಗುತ್ತದೆ, ಬಿಸಿ ನೀರಿನ ಆವಿ ತೆಗೆದುಕೊಂಡರೆ ಹೋಗುತ್ತದೆ ಎಂಬಿತ್ಯಾದಿಗಳು ತಪ್ಪು ಕಲ್ಪನೆಗಳು. ಆದರೆ, ಇದ್ಯಾವುದನ್ನೂ ಮಾಡದೆ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆ ಪಡೆದರೆ ಮಾತ್ರ ಗುಣಮುಖರಾಗಬಹುದು ಎಂದು ಸಚಿವರಾದ ಸೋಮಶೇಖರ್ ಅವರು ಹೇಳಿದರು.

ಕಗ್ಗಲಿಪುರ ಸಮೀಪ ಕೇರ್ ಸೆಂಟರ್:
ಕಗ್ಗಲಿಪುರ ಸುತ್ತಮುತ್ತ ಸಹ ಇನ್ನೆರಡು ದಿನದಲ್ಲಿ ಒಂದು ಕೋವಿಡ್ ಕೇರ್ ಸೇಂಟರ್ ಹಾಗೂ ಟ್ರಯಾಜ್ ಸೆಂಟರ್ ಅನ್ನು ತೆರೆಯಲಿದ್ದೇವೆ. ಹೀಗಾಗಿ ಜನರು ಆತಂಕಗೊಳ್ಳುವುದು ಬೇಡ. ಜನರಿಗೆ ಸೂಕ್ತ ಮಾರ್ಗದರ್ಶನ, ಮಾಹಿತಿ ಹಾಗೂ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಸಚಿವರು ತಿಳಿಸಿದರು.

somashekar ravishankar guruji

ಗೂಂಡಾಗಿರಿ ಸಹಿಸಲ್ಲ:
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೇ ಪ್ರತ್ಯೇಕ ವಾರ್ ರೂಂ ಹಾಗೂ 17 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಪ್ರತ್ಯೇಕ ವಾರ್ ರೂಂ ವ್ಯವಸ್ಥೆಯನ್ನು ಮಾಡಿದ್ದೇವೆ. ಅದಕ್ಕೆ ಒಬ್ಬ ವೈದ್ಯರು, ನೋಡಲ್ ಅಧಿಕಾರಿಗಳ ಸಹಿತ ಅಗತ್ಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇಲ್ಲಿ ಎಲ್ಲ ರೀತಿಯ ಮಾಹಿತಿ ಲಭ್ಯವಾಗುತ್ತಿದ್ದು, ಕೆಲಸ ಮಾಡುವ ಸಿಬ್ಬಂದಿಗೆ ಹಾಗೂ ಕಾರ್ಯಕರ್ತರಿಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ನಿಮಗೆ ಅವಹೇಳನ ಮಾಡಿದರೆ ನನಗೆ ಮಾಡಿದಂತೆ ಎಂದು ಭಾವಿಸುವವನು ನಾನು. ಯಾವುದೇ ಕಾರಣಕ್ಕೂ ಗೂಂಡಾಗಿರಿ ಮಾಡುವುದನ್ನು ನಾನು ಸಹಿಸುವುದಿಲ್ಲ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ನಾನು ಸೂಚನೆ ಕೊಟ್ಟಿದ್ದೇನೆ. ಇದು ನನ್ನ ಕ್ಷೇತ್ರವಾಗಲಿ ಇಲ್ಲವೇ ಉಸ್ತುವಾರಿ ಹೊತ್ತಿರುವ ಮೈಸೂರು ಜಿಲ್ಲೆಯಾಗಲಿ, ಎಲ್ಲ ಕಡೆಯೂ ಪಾಲನೆಯಾಗಲಿದೆ. ತೊಂದರೆ ಕೊಟ್ಟವರು ಯಾರೇ ಆಗಿರಲಿ, ನನ್ನ ಹತ್ತಿರದವರಾಗಿರಲಿ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ತಿಳಿಸಿದರು.

muruga shree somashekar 1

ಕಠಿಣ ಕ್ರಮ:
ಪಾಸಿಟಿವ್ ಬಂದವರು ಕೆಲಸಕ್ಕೆ ಹೋಗುತ್ತಿದ್ದರೆ ಅಂಥವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಕಾರಣ, ಅವರಿಂದ ನೂರಾರು ಜನರಿಗೆ ಹರಡುತ್ತದೆ. ಆದರೆ, ಕೆಲವು ಜನರಿಗೆ ಇನ್ನೂ ಇದರ ತೀವ್ರತೆ ಅರಿವಾಗಿಲ್ಲ. ಈ ಕಾರಣಕ್ಕೆ ಪ್ರತಿ ಹಳ್ಳಿಗಳಿಗೆ ಟಾಸ್ಕ್ ಫೋರ್ಸ್ ಜೊತೆಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಲಿದ್ದೇನೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಟ್ರಯಾಜ್ ಸೆಂಟರ್ ಕಾರ್ಯನಿರ್ವಹಣೆ ಹೇಗೆ? ಅಲ್ಲಿ ಯಾವ ರೀತಿ ಸಲಹೆಗಳನ್ನು ಕೊಡಲಾಗುತ್ತದೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿರುವ ಕೋವಿಡ್ ಕೇರ್ ಸೆಂಟರ್ ಗಳು ಹಾಗೂ ಟ್ರಯಾಜ್ ಸೆಂಟರ್ ಗಳಲ್ಲಿನ ಚಿಕಿತ್ಸಾ ವಿಧಾನ, ಬೆಡ್, ಆಕ್ಸಿಜನ್ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಆರೋಗ್ಯಾಧಿಕಾರಿಗಳು 5 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಮತ್ತು ಗ್ರಾಮ ಮಟ್ಟದ ಕಾರ್ಯಪಡೆಗಳ ಸದಸ್ಯರಿಗೆ ತಿಳಿವಳಿಕೆ ಮೂಡಿಸಿದರು.

muruga shree somashekar 2

ಬೆಂಗಳೂರು ದಕ್ಷಿಣ ಉಪ ವಿಭಾಗ ವಿಭಾಗಾಧಿಕಾರಿ ಶಿವಣ್ಣ, ದಕ್ಷಿಣ ತಾಲ್ಲೂಕು ವೈದ್ಯಾಧಿಕಾರಿ ಧನ್ಯ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗವೇಣಿ, ಮಹಿಳಾ ಶಿಶು ಅಭಿವೃದ್ಧಿಕಾರಿ ರಜನಿ, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

ಸೋಮನಹಳ್ಳಿ ಗ್ರಾಮ ಪಂಚಾಯಿತಿಯ ಸೋಮನಹಳ್ಳಿ ಗ್ರಾಮದ ರಮೇಶ್ ನಗರ ಆಶ್ರಯ ಬಡಾವಣೆಯಲ್ಲಿ ಪಡಿತರ ಕಿಟ್ ವಿತರಣೆಗೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಚಾಲನೆ ನೀಡಿದರು. ಮನೆಯಿಂದ ಯಾರೂ ಅನವಶ್ಯಕವಾಗಿ ಹೊರಗೆ ಬರಬೇಡಿ, ಎಲ್ಲರೂ ವ್ಯಾಕ್ಸಿನೇಶನ್ ಮಾಡಿಸಿಕೊಳ್ಳಿ ಎಂದು ಸಚಿವರಾದ ಸೋಮಶೇಖರ್ ಅವರು ಈ ಸಂದರ್ಭದಲ್ಲಿ ನಾಗರಿಕರಿಗೆ ಕಿವಿಮಾತು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *