ಹಾಸನ: ನಗರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಮೃತಪಟ್ಟು 14 ಮಂದಿ ಗಾಯಗೊಂಡಿದ್ದಾರೆ.
ಹಾಸನ ನಗರದ ಹೊರವಲಯದ ಕೆಂಚಟ್ಟಳ್ಳಿ ಬಳಿ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಟಾಟಾಸುಮೋಗೆ ಹಿಂಬದಿಯಿಂದ ಕ್ವಾಲೀಸ್ ಕಾರ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕ್ವಾಲಿಸ್ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಮೃತರನ್ನು ಪ್ರದೀಪ್ ಕುಮಾರ್, ಚಂದ್ರಶೇಖರ್, ನವೀನ್ ಕುಮಾರ್, ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಟಾಟಾಸುಮೋ ಪಲ್ಟಿಯಾಗಿದ್ದು, ಅದರಲ್ಲಿದ್ದ 10 ಮಂದಿಯೂ ಗಾಯಗೊಂಡಿದ್ದಾರೆ. ಎಲ್ಲರೂ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಂಚಟ್ಟಳ್ಳಿ ಬಳಿ ಹಮ್ಸ್ ಇದ್ದು, ಟಾಟಾಸುಮೋ ಹಮ್ಸ್ ಬಳಿ ಸ್ಲೋ ಮಾಡಿದಾಗ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಕ್ವಾಲಿಸ್ ಡಿಕ್ಕಿಯೊಡೆದಿದೆ.
ಟಾಟಾಸುಮೋದಲ್ಲಿದ್ದ ಎಲ್ಲರೂ ಮಳಬಾಗಿಲು ಮೂಲದವರಾಗಿದ್ದ ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ಕ್ವಾಲಿಸ್‍ನಲ್ಲಿದ್ದವರು ಕೆಜಿಎಫ್ ಮೂಲದವರಾಗಿದ್ದು ಉಡುಪಿಗೆ ಮದುವೆಗೆ ಹೋಗುತ್ತಿದ್ದರು. ವಿಷಯ ತಿಳಿದ ತಕ್ಷಣ ಸಂಚಾರಿ ಪೊಲೀಸರು, ಹಾಸನ ಎಸ್‍ಪಿ ಶ್ರೀನಿವಾಸ್‍ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾಸನ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.