ಹಾಸನ: ಮಹಾರಾಷ್ಟ್ರದಿಂದ ಆಗಮಿಸುವವರು ಸೇರಿದಂತೆ ಹೊರರಾಜ್ಯದಿಂದ ಬರುವವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇಡುವ ಬಗ್ಗೆ ಸರ್ಕಾರ ನೀತಿ, ನಿಯಮಗಳನ್ನು ಸಡಿಲಿಸಿರುವ ಬಗ್ಗೆ ಶಾಸಕರಾದ ಶಿವಲಿಂಗೇಗೌಡ ಮತ್ತು ಬಾಲಕೃಷ್ಣ ಆತಂಕ ಹೊರಹಾಕಿದ್ದಾರೆ.
ಈ ಬಗ್ಗೆ ಹಾಸನದಲ್ಲಿ ಮಾತನಾಡಿದ ಶಾಸಕ ಬಾಲಕೃಷ್ಣ, ಏಳು ದಿನಕ್ಕೆ ಇಳಿಸಿರುವುದು ಸೂಕ್ತವಲ್ಲ. ಮನೆಗೆ ಕಳುಹಿಸಿದವರಲ್ಲೂ ಪಾಸಿಟಿವ್ ಬರುವ ಸಂದರ್ಭ ಬಂದಿದೆ. ಅಷ್ಟೇ ಅಲ್ಲದೆ ರೋಗ ಲಕ್ಷಣ ಇಲ್ಲದಿದ್ದರೆ ಟೆಸ್ಟ್ ಮಾಡಬೇಡಿ ಎಂಬ ಹೊಸ ಪಾಲಿಸಿ ಆತಂಕ ತಂದಿದೆ. ಇದರಿಂದ ಹಳ್ಳಿಗಳಲ್ಲಿ ಆತಂಕ ಹೆಚ್ಚಾಗುತ್ತಿದೆ. ಕೆಲವೊಬ್ಬರಿಗೆ ರೋಗ ಲಕ್ಷಣ ಇಲ್ಲದಿದ್ದರೂ ಕೊರೊನಾ ಇದೆ. ಹೀಗಾಗಿ ಹೊರರಾಜ್ಯದಿಂದ ಬಂದವರಿಗೆ ಕನಿಷ್ಟ 14 ದಿನ ಕ್ವಾರಂಟೈನ್ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಕೊರೊನಾ ಬಗ್ಗೆ ಏಕ್‍ದಂ ಈ ರೀತಿ ನಿರ್ಧಾರಕ್ಕೆ ಬರಬಾರದಿತ್ತು. ಕೊರೊನಾಗೆ ಈಗ ಹರಡೋ ಶಕ್ತಿ ಇಲ್ಲ ಅಂದ್ರೆ ಒಂದು ಹೇಳಿಕೆ ಕೊಟ್ಟುಬಿಡಿ. ಎಲ್ಲವನ್ನೂ ಓಪನ್ ಮಾಡಿಬಿಡಿ. ಇಷ್ಟೊಂದು ದಿನ ಯಾಕೆ ಕಷ್ಟ ಪಡಬೇಕಿತ್ತು. ಈ ವೈರಾಣುಗೆ ಹೆದರಿ ನಾವು ಇವರು ಹೇಳಿದಂತೆ ಕೇಳಿದ್ದೇವೆ. ಪ್ರಧಾನಿಗಳು ಅವರು ಮನೆಯಲ್ಲೇ ಮಾಸ್ಕ್ ಹಾಕಿದ್ದಾರೆ ಎಂಬ ರೀತಿ ತೋರಿಸಿದರು ಎಂದು ಕಿಡಿಕಾರಿದರು.
ಈಗ ಸರ್ಕಾರ ಅದೊಂದು ಸಾಮಾನ್ಯ ವೈರಾಣು ಅದಕ್ಕೆ ಹೆದರುವ ಅವಶ್ಯಕತೆಯಿಲ್ಲ ಎಂಬ ಭಾವನೆ ವ್ಯಕ್ತಮಾಡುತ್ತಿದೆ. ಇನ್ನೂ ಸ್ವಲ್ಪ ದಿನ ಈ ಬಗ್ಗೆ ಎಚ್ಚರ ವಹಿಸಬೇಕಿತ್ತು. ಈಗ ಸಾಮಾಜಿಕ ಅಂತರ ಎಲ್ಲ ಮರೆತು ನೇರವಾಗಿ ಹೋಂ ಕ್ವಾರಂಟೈನ್‍ಗೆ ಕಳುಹಿಸಿದರೆ ಹೇಗೆ? ಶಾಲೆಗಳನ್ನು ಯಾವುದೇ ಕಾರಣಕ್ಕೂ ಓಪನ್ ಮಾಡಬಾರದು. ಈ ವಿಚಾರದಲ್ಲಿ ದುಡುಕಬಾರದು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.