ಚಿಕ್ಕಮಗಳೂರು: ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆಯ ಆಗರವಾಗಿದ್ದು, ಕುಡಿಯುವ ನೀರು ಸರಿ ಇಲ್ಲ. ಊಟವನ್ನು ಬಾಗಿಲಲ್ಲಿ ಇಟ್ಟು ಹೋಗುತ್ತಾರೆ. ಶೌಚಾಲಯಕ್ಕೆ ಹೋಗುವಂತಿಲ್ಲ. ಅಂತಹ ಪರಿಸ್ಥಿತಿ ಇದೆ. ಹೀಗಾಗಿ ನಮ್ಮನ್ನು ಮನೆಗೆ ಕಳುಹಿಸಿ ಎಂದು ಕ್ವಾರಂಟೈನ್ ಕೇಂದ್ರದಲ್ಲಿದ್ದವರು ಗೋಳಿಡುತ್ತಿದ್ದಾರೆ.
ಜಿಲ್ಲೆಯ ಕಡೂರು ತಾಲೂಕಿನ ಕಾಮನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಘಟನೆ ನಡೆದಿದ್ದು, ಕಾಮನಕೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೆ.ದಾಸರಹಳ್ಳಿಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ವಿದ್ಯಾರ್ಥಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 55 ಜನರನ್ನು ಕಾಮನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಅಲ್ಲಿ ಯಾವ ಸೌಲಭ್ಯವೂ ಇಲ್ಲ ಎಂದು ಕ್ವಾರಂಟೈನ್ ಕೇಂದ್ರದಲ್ಲಿರುವವರು ಗೋಳಿಡುತ್ತಿದ್ದಾರೆ. ಸ್ಯಾನಿಟೈಸರ್, ಮಾಸ್ಕ್ ಯಾವುದನ್ನೂ ಕೊಟ್ಟಿಲ್ಲ. ಕುಡಿಯುವ ನೀರು ಸಹ ಸರಿ ಇಲ್ಲ. ಶೌಚಾಲಯಕ್ಕೆ ಹೋಗದಂತಹ ಕೆಟ್ಟ ಪರಿಸ್ಥಿತಿ ಇದೆ. ನಾವು ಶಂಕಿತರು, ಸೋಂಕಿತರಲ್ಲ. ಊಟವನ್ನು ಬಾಗಿಲಲ್ಲಿ ಇಟ್ಟು ಹೋಗುತ್ತಾರೆ. ಅಲ್ಲದೆ ರೂಮಿನಲ್ಲಿ ಬಿಟ್ಟು ಬೀಗ ಹಾಕಿಕೊಂಡು ಹೋಗುತ್ತಾರೆ. ಚಿಕ್ಕ ಮಕ್ಕಳಿದ್ದಾರೆ, ಮಾತ್ರೆ ಕೂಡ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನಮ್ಮನ್ನು ಮನೆಗೆ ಕಳುಹಿಸಿ, ನಾವು ಇಲ್ಲಿ ಇರುವುದಿಲ್ಲ. ಮನೆಯಲ್ಲೇ ಚೆನ್ನಾಗಿ ಇರುತ್ತೇವೆ. ಊಟಕ್ಕೆ, ನೀರು ಕುಡಿಯಲು ಹೋದಾಗ ಎಲ್ಲರೂ ಒಟ್ಟಿಗೆ ಇರುತ್ತೇವೆ. ಕ್ವಾರಂಟೈನ್ ಮಾಡಿ ಏನು ಪ್ರಯೋಜನ. ಮನೆಯಲ್ಲೇ ಎಚ್ಚರದಿಂದ ಇರುತ್ತೇವೆ, ದಯವಿಟ್ಟು ನಮ್ಮನ್ನು ಮನೆಗೆ ಕಳುಹಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.