– ಗಾಯಗೊಂಡ ಕೊರೊನಾ ವಾರಿಯರ್ ಆಸ್ಪತ್ರೆಯಲ್ಲಿ ನರಳಾಟ
ಬಾಗಲಕೋಟೆ: ಕ್ವಾರಂಟೈನ್ ಆಗಿ ಎಂದು ಹೇಳಿದ್ದ ಕೊರೊನಾ ವಾರಿಯರ್ ನರ್ಸ್ ಒಬ್ಬರ ಮೇಲೆ ಕುಟುಂಬಸ್ಥರು ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೊಸಕೋಟೆ ನಡೆದಿದೆ.
ಹಲ್ಲೆಗೊಳಗಾದ ನರ್ಸ್ ಅವರನ್ನು ರಾಜೇಶ್ವರಿ ಮ್ಯಾಗಿನಮನಿ (47) ಎಂದು ಗುರುತಿಸಲಾಗಿದೆ. ಇಂದ್ರವ್ವ ಅರಹುಣಶಿ, ಪರಶುರಾಮ ನಾಯ್ಕರ್, ದೇವಕೆವ್ವ ನಾಯ್ಕರ್, ಗೋಪಾಲ ನಾಯ್ಕರ್ ಎಂಬವರು ಹಲ್ಲೆ ಮಾಡಿದ್ದಾರೆ. ಕೊರೊನಾ ಲಕ್ಷಣಗಳಿವೆ ಕ್ವಾರಂಟೈನ್ ಆಗಿರಿ ಮನೆ ಬಿಟ್ಟು ಬರಬೇಡಿ ಎಂದು ಸೂಚಿಸಿದ್ದಕ್ಕೆ, ನಮಗೆ ಊರಲ್ಲಿ ಅವಮಾನ ಮಾಡಿದೆ ಎಂದು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಲಾಗಿದೆ.
ಕೆರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸರ್ಕಾರಿ ಮಹಿಳಾ ಕಿರಿಯ ಆರೋಗ್ಯ ಸಹಾಯಕಿಯಾಗಿ ರಾಜೇಶ್ವರಿಯವರು ಕೆಲಸ ಮಾಡುತ್ತಿದ್ದಾರೆ. ಇವರು ಇಂದ್ರವ್ವ ಅರಹುಣಶಿವರಗೆ ಕೊರೊನಾ ಲಕ್ಷಣ ಇರುವ ಕಾರಣ ಕ್ವಾರಂಟೈನ್ ಆಗಿದ್ದು, ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸೂಚಿಸಿದ್ದರು. ಆದರೆ ತಪಾಸಣೆ ವೇಳೆ ವರದಿ ನೆಗೆಟಿವ್ ಬಂದಿತ್ತು. ಈ ಕಾರಣದಿಂದ ಸುಮ್ಮನೆ ನಮ್ಮ ಮರ್ಯಾದೆ ಹಾಳು ಮಾಡಿದೆ ಎಂದು ಅವರ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ.
ಸದ್ಯ ಗಾಯಗೊಂಡ ಕೊರೊನಾ ವಾರಿಯರ್ ರಾಜೇಶ್ವರಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಹಲ್ಲೆ ಮಾಡಿದವರ ವಿರುದ್ಧ ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.