ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಕೊಲೆಗೆ ಯತ್ನ -ಜೈಲಿನಲ್ಲೇ ಸಂಚು, ಐವರು ಅರೆಸ್ಟ್

Public TV
3 Min Read
shashikumar

ಬೆಂಗಳೂರು: ಖಾಸಗಿ ಶಾಲೆಗಳ ಒಕ್ಕೂಟ ಕಾರ್ಯದರ್ಶಿ (ಕ್ಯಾಮ್ಸ್) ಶಶಿಕುಮಾರ್ ಮೇಲೆ ನಡೆದಿದ್ದ ಕೊಲೆ ಯತ್ನ ಪ್ರಕರಣ ಭೇದಿಸಿರುವ ಜಾಲಹಳ್ಳಿ ಪೊಲೀಸರು ಐವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡ ಜಾಲಹಳ್ಳಿ ಇನ್ ಸ್ಪೆಕ್ಟರ್ ಗುರುಪ್ರಸಾದ್ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ದೀಲಿಪ್, ಅಭಿಷೇಕ್, ಕಾರ್ತಿಕ್, ಭರತ್ ಹಾಗೂ ಪವನ್ ಬಂಧಿಸಿ ಒಂದು ಪಿಸ್ತೂಲ್, ಮೂರು ಜೀವಂತ ಗುಂಡುಗಳು, ಮಾರಕಾಸ್ತ್ರಗಳು, ಡ್ರ್ಯಾಗರ್, ಪೆಪ್ಪರ್ ಸ್ಪ್ರೆ ಬಾಟೆಲ್ ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಿಕೊಂಡಿದ್ದಾರೆ.

KAMS Shashi Kumar accused

ಕೃತ್ಯದಲ್ಲಿ ಪ್ರಮುಖ ಆರೋಪಿ ಲಗ್ಗೆರೆ ರವಿ ಸೇರಿದಂತೆ ಆರು ಮಂದಿ ಭಾಗಿಯಾಗಿ ತಲೆಮರೆಸಿಕೊಂಡಿದ್ದು ಶೀಘ್ರದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಗರ ಉತ್ತರ ವಿಭಾಗದ ಡಿಸಿಪಿ ಧಮೇರ್ಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ಅಂದು ನಡೆದಿದ್ದೇನು?
ಕ್ಯಾಮ್ಸ್ ಕಾರ್ಯದರ್ಶಿಯಾಗಿರುವ ಶಶಿಕುಮಾರ್ ಕಳೆದ ತಿಂಗಳ 29ರ ರಾತ್ರಿ 9 ಗಂಟೆ ಸುಮಾರಿಗೆ ಜಾಲಹಳ್ಳಿ ನಿವಾಸ ಬಳಿ ಕಾರಿನಿಂದ ಇಳಿಯುತ್ತಿದ್ದಾಗ ದುಷ್ಕರ್ಮಿಗಳು ಏಕಾಏಕಿ ಶಶಿಕುಮಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಕೂಡಲೇ ಕಾರಿನಲ್ಲಿ ಕುಳಿತಕೊಂಡ ಶಶಿಕುಮಾರ್ ಗೆ ಸಣ್ಣಪುಟ್ಟ ಗಾಯವಾಗಿತ್ತು. ಜೀವ ರಕ್ಷಣೆಗಾಗಿ ತಮ್ಮ ಬಳಿಯಿದ್ದ ಪಿಸ್ತೂಲ್ ತೆಗೆಯುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು. ಮಾಹಿತಿ ಆಧರಿಸಿ ಸ್ಥಳಕ್ಕೆ ಪೊಲೀಸರು ಬಂದು ಮಾಹಿತಿ ಕಲೆ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳ ಪತ್ತೆಗಾಗಿ ಎಸಿಪಿ ಅರುಣ್ ನಾಗೇಗೌಡ ನೇತೃತ್ವದಲ್ಲಿ ಇನ್ ಸ್ಪೆಕ್ಟರ್ ಗುರುಪ್ರಸಾದ್ ಸಾರಥ್ಯದಲ್ಲಿ ನಾಲ್ಕು ವಿಶೇಷ ತಂಡ ರಚಿಸಿ ಚುರುಕಿನಿಂದ ತನಿಖೆ ನಡೆಸಿ ಐದು ಮಂದಿ ಆರೋಪಿಗಳ ಬಂಧನಕ್ಕೆ ಕಾರಣವಾಗಿದೆ.

 

KAMS Shashi Kumar accused 1

ಕಾರಣವೇನು?
2014 ರಿಂದ ಕರ್ನಾಟಕ ವಿದ್ಯಾರ್ಥಿ ಪೋಷಕರ ಸಂಘದಲ್ಲಿ ಗುರುತಿಸಿಕೊಂಡಿದ್ದ ಲಗ್ಗೆರೆ ರವಿ ರಾಜಗೋಪಾಲನಗರ ಠಾಣೆಯ ರೌಡಿಶೀಟರ್ ಆಗಿ ಕುಖ್ಯಾತಿ ಪಡೆದುಕೊಂಡಿದ್ದ. 2019 ರಲ್ಲಿ ವಿಜಯನಗರ ಠಾಣಾ ವ್ಯಾಪ್ತಿಯ ಶಾಲೆಯೊಂದರ ಪ್ರಿನ್ಸಿಪಾಲ್ ಆಗಿದ್ದ ವೀರಭದ್ರಪ್ಪ ಎಂಬುವರ ಅಪಹರಣ ಸೇರಿದಂತೆ ಏಳಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ.

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ರವಿ ಜೈಲು ಸೇರಿದ್ದ. ಇನ್ನೊಂದಡೆ ಖಾಸಗಿ ಶಾಲೆಗಳ ಮಾಲೀಕರಿಂದ ಹಫ್ತಾ ವಸೂಲಿ ನಿಂತಿದ್ದರಿಂದ ಹಾಗೂ ಮರಳಿ ಹಣ ಪಡೆಯಲು ಯೋಜನೆ ರೂಪಿಸಿದ್ದ. ಅಲ್ಲದೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮುಗಿಸಿದರೆ ಇತರೆ ಖಾಸಗಿ ಶಾಲೆಗಳ ಮಾಲೀಕರು ಹಫ್ತಾ ನೀಡುತ್ತಾರೆ ಎಂದು ಭಾವಿಸಿದ್ದ. ಇದೇ ದುರುದ್ದೇಶದಿಂದ ಜೈಲಿನಲ್ಲಿದ್ದ ಎರಡನೇ ಆರೋಪಿ ದಿಲೀಪ್ ಪರಿಚಯಿಸಿಕೊಂಡು ಸಂಚು ರೂಪಿಸಿದ್ದ. ರವಿ ಅಣತಿಯಂತೆ ದೀಲಿಪ್ ಸಹಚರರಿಗೆ ವಿಷಯ ತಿಳಿಸಿದ್ದಾನೆ. ಜಾಮೀನು ಪಡೆದು ಹೊರ ಬಂದಿದ್ದ ಆರೋಪಿಗಳು ಶಶಿಕುಮಾರ್ ಕೊಲೆ ಸಂಚು ರೂಪಿಸಿದ್ದರು.

dcp bengluru

6 ತಿಂಗಳ ಹಿಂದೆಯೇ ಪ್ಲ್ಯಾನ್
ಶಶಿಕುಮಾರ್ ಹತ್ಯೆ ಮಾಡಲು ನಿರ್ಧರಿಸಿದ ಆರೋಪಿಗಳು ಜಾಲಹಳ್ಳಿಯ ಮುತ್ಯಾಲನಗರದಲ್ಲಿ ರವಿ ಮಾಡಿದ್ದ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು. ನಿರಂತರವಾಗಿ ಶಶಿಕುಮಾರ್ ಚಲನವಲನಾ ಬಗ್ಗೆ ನಿಗಾ ವಹಿಸಿದ್ದರು. ಕಳೆದ ತಿಂಗಳು 29 ರಂದು ಜಾಲಹಳ್ಳಿ ಬಳಿ ಹತ್ಯೆ ಮಾಡಲು ಮುಂದಾಗಿದ್ದರು. ದಾಳಿಯಲ್ಲಿ ಶಶಿಕುಮಾರ್ ಬಳಿಯಿದ್ದ ಲೈಸೆನ್ಸ್ ಪಿಸ್ತೂಲ್ ಕಂಡು ಕ್ಷರ್ಣಾಧದಲ್ಲಿ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಬಂಧನ ಭೀತಿಯಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕೋಲಾರ, ಮಾಲೂರು ಸೇರಿದಂತೆ ಇನ್ನಿತರ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.  ಇದನ್ನೂ ಓದಿ : ಪ್ರವಾಸಿಗರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ- 2 ಕಿ.ಮೀ. ಸಾಲುಗಟ್ಟಿ ನಿಂತ ವಾಹನಗಳು 

ಶಶಿಕುಮಾರ್ ನನ್ನು ಮುಗಿಸಲೇ ಬೇಕೆಂಬ ತೀರ್ಮಾನಿಸಿದ್ದ ರವಿ ಅಂಡ್ ಗ್ಯಾಂಗ್ 29 ರಂದು ರಾತ್ರಿ ಕೊಲೆ ಮಾಡಲು ನಿರ್ಧರಿಸಿದ್ದರು. ಪ್ರತಿದಿನ ಸಾಕುನಾಯಿ ವಾಕ್ ಮಾಡಲು ಕರೆದುಕೊಂಡು ಬರುವಾಗ ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಆದರೆ ಆ ದಿನ ರಾತ್ರಿ ಬೇಗನೇ ಜಾಲಹಳ್ಳಿಯಿಂದ ಗಾಂಧಿನಗರ ನಿವಾಸಕ್ಕೆ ಹೋಗಲು ಕಾರು ಹತ್ತಿದ್ದ ಶಶಿಕುಮಾರ್ ನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಅಲ್ಲದೆ ಆರೋಪಿ ದಿಲೀಪ್ ಉಳಿದುಕೊಂಡಿದ್ದ ಮನೆಯಲ್ಲಿ ಕಂಟ್ರಿಮೇಡ್ ಪಿಸ್ತೂಲ್ ಮೂವರು ಸಜೀವ ಗುಂಡುಗಳಿದ್ದರೂ ಇದನ್ನು ಬಳಸಲು ಬರದ ಕಾರಣ ಮಾರಕಾಸ್ತ್ರ ಮೊರೆ ಹೋಗಿದ್ದರು. ಪತ್ತೆಯಾಗಿರುವ ಪಿಸ್ತೂಲ್ ಬಗ್ಗೆ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನ ಬಳಿಕ ವಿಷಯ ಬಯಲಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *