ಬೆಂಗಳೂರು: ಹೊಸ ಕ್ಯಾಬಿನೆಟ್ ಗೆ ಮುನ್ನವೇ ಬಿಜೆಪಿಯಲ್ಲಿ ಭಿನ್ನಮತ ಸ್ಪೊಟಗೊಂಡಿದ್ದು, ಅಸಮಾಧಾನಿತ ಸವದತ್ತಿ ಶಾಸಕ, ಡೆಪ್ಯೂಟಿ ಸ್ಪೀಕರ್ ಆನಂದ್ ಮಾಮನಿ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಬಳಿಕ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. ಸದ್ಯ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ನಾನು 3 ಬಾರಿ ಶಾಸಕನಾಗಿದ್ದೇನೆ. ನನ್ನ ಸಚಿವನನ್ನಾಗಿ ಮಾಡಬೇಕು ಎಂದು ವಿನಂತಿ ಮಾಡಿದ್ದೇನೆ. ಆಯ್ತು ಒಳ್ಳೆಯದಾಗುತ್ತೆ. ನಿಮಗೆ ಫೋನ್ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. ಈಗಲೂ ಸಚಿವ ಸ್ಥಾನ ಸಿಗುತ್ತೆ ಎಂಬ ಭರವಸೆ ಆತ್ಮವಿಶ್ವಾಸದಲ್ಲಿ ಇದ್ದೇನೆ ಎಂದರು.
ಇದೂವರೆಗೂ ನನಗೆ ದೂರವಾಣಿ ಕರೆ ಬಂದಿಲ್ಲ. ಒಂದು ವೇಳೆ ಸಚಿವ ಸ್ಥಾನ ಸಿಗದೇ ಇದ್ದರೆ ವಿಧಾನಸಭಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ಮಧ್ಯಾಹ್ನ ಸಚಿವ ಸಂಪುಟ ವಿಸ್ತರಣೆ ಆಗುವವರೆಗೂ ಕಾಯುತ್ತೇನೆ. ನಂತರ ಸಿಎಂ ಹಾಗೂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಕಾರ್ಯಕರ್ತರ ಅಭಿಪ್ರಾಯವನ್ನು ತೆಗೆದುಕೊಂಡು ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಹೇಳಿದರು.
2008, 2013 ಹಾಗೂ 2018ರ ಚುನಾವಣೆಯಲ್ಲಿ ಮೂರು ಬಾರಿಯೂ ಸತತವಾಗಿ ಗೆಲುವು ಸಾಧಿಸಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ, ನನ್ನ ಕುಟುಂಬದಲ್ಲಿ 8 ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿದಂತ ಸಂದರ್ಭದಲ್ಲಿ 6 ಚುನಾವಣೆಯಲ್ಲಿ ತಂದೆ 2 ಬಾರಿ, ಸೋದರ ರಾಜಣ್ಣ ಮಾಮನಿ ಒಂದು ಬಾರಿ ಪಕ್ಷೇತರ ಹಾಗೂ ನಾನು 3 ಬಾರಿ ಸತತವಾಗಿ ಗೆದ್ದಿದ್ದೇನೆ ಎಂದು ತಿಳಿಸಿದರು.
ನನಗೆ ಸಚಿವ ಸ್ಥಾನ ಸಿಗದೇ ಇದ್ದರೆ ನಾನು ಮತ್ತೊಮ್ಮೆ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪಕ್ಷದ ಪ್ರಮುಖ ನಾಯಕರನ್ನು ಭೇಟಿಯಾಗುತ್ತೇನೆ. ಕೊನೆಯ ಹಂತದಲ್ಲಿ ನನ್ನ ಕ್ಷೇತ್ರದ ಜನರ ಹಾಗೂ ಕಾರ್ಯಕರ್ತರ ಅಭಿಪ್ರಾಯವನ್ನು ತೆಗೆದುಕೊಂಡು ವಿಧಾನಸಭಾ ಉಪಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಈ ಹಿಂದೆ ಸಚಿವ ಸ್ಥಾನ ಕೊಡದೇ ಇದ್ದರೆ ವಿಧಾನಸಭಾ ಡೆಪ್ಯೂಟಿ ಸ್ಪೀಕರ್ ಸ್ಥಾನ ಕೊಡಲಿ ಎಂದು ಹೇಳಿದ್ರಿ. ಇದೀಗ ಮಾತು ಬದಲಾಯಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಗೇರಿ, ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪೀಕರ್ ಆಗಿದ್ದಾರೆ. ಅವರಿಗೂ ಕೂಡ ಮಂತ್ರಿಯಾಗಬೇಕು ಅನ್ನೋದು ಇದೆ. ಸದ್ಯ ನಾನು ವಿಧಾನಸಭಾ ಉಪಾಧ್ಯಕ್ಷನಾಗಿರುವುದರಿಂದ ಸಂವಿಧಾನಾತ್ಮಕ ಹುದ್ದೆ ಇರುವುದರಿಂದ ಯಾವುದೇ ಸಚಿವರ ಬಾಗಿಲಿಗೆ ಹೋಗಲ್ಲ. ಶಿಷ್ಟಾಚಾರ ಪ್ರಕಾರ ಹೋಗೋಕೆ ಆಗ್ತಿಲ್ಲ. ಅಭಿವೃದ್ಧಿ ಕುಂಠಿತ ಆಗುತ್ತಿದೆ. ಆ ದೃಷ್ಟಿಯಲ್ಲಿ ಜನ ಕೇಳುತ್ತಿದ್ದಾರೆ. ಸರ್ಕಾರ ನಿಮ್ಮದಿದೆ. ಅನುದಾನ ಉಯಾಕೆ ಬರುತ್ತಿಲ್ಲ. ಕುರಿಯುವ ನೀರು, ಶಾಲಾ ಕೊಠಡಿಗಳ ಸಮಸ್ಯೆ ಇದೆ. ಹೀಗೆ ಎಲ್ಲವನ್ನೂ ಜನ ಕೇಳುತ್ತಿದ್ದಾರೆ. ಹೀಗಾಗಿ ಸಚಿವನಾಗಿ ನನ್ನ ಕ್ಷೇತ್ರದ ಜನರಿಗಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.