ಮುಂಬೈ: ಕ್ಯಾಚ್ ಕೈ ಚೆಲ್ಲಿದ್ದರೂ ಕೊನೆಯಲ್ಲಿ ಬೌಲರ್‌ಗಳು ಮ್ಯಾಜಿಕ್ ಮಾಡಿದ ಪರಿಣಾಮ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ 10 ರನ್‍ಗಳಿಂದ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿದೆ.
ಮುಂಬೈ ನೀಡಿದ್ದ 153 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ಸುಲಭವಾಗಿ ಗೆಲ್ಲಬಹುದು ಎಂದು ಆರಂಭದಲ್ಲಿ ನಿರೀಕ್ಷಿಸಲಾಗಿತ್ತು. ಆದರೆ ರಾಹುಲ್ ಚಹರ್ ಸ್ಪಿನ್ ಮೋಡಿ ಜೊತೆಗೆ ಸ್ಲಾಗ್ ಓವರ್‌ಗಳಲ್ಲಿ ರನ್‍ಗಳಿಗೆ ಮುಂಬೈ ಬೌಲರ್‍ಗಳು ಕಡಿವಾಣ ಹಾಕಿದ್ದರಿಂದ ಕೋಲ್ಕತ್ತಾ ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 142 ರನ್‍ಗಳಿಸಿ ಸೋಲನ್ನು ಒಪ್ಪಿಕೊಂಡಿತು.
ಸೋತಿದ್ದು ಹೇಗೆ?
ಕೊನೆಯ 18 ಎಸೆತದಲ್ಲಿ 22 ರನ್ ಬೇಕಿತ್ತು. ಪಂದ್ಯದ ಚಿತ್ರಣವನ್ನೇ ತಿರುಗಿಸಬಲ್ಲ ಆಟಗಾರರಾದ ದಿನೇಶ್ ಕಾರ್ತಿಕ್ ಮತ್ತು ಆಂಡ್ರೆ ರಸೆಲ್ ಕ್ರೀಸ್‍ನಲ್ಲಿದ್ದರು. ಕೃನಾಲ್ ಎಸೆದ 18ನೇ ಓವರಿನಲ್ಲಿ 3 ರನ್ ನೀಡಿದರೆ, 19ನೇ ಓವರ್ ಎಸೆದ ಬುಮ್ರಾ 4 ರನ್ ನೀಡಿ ನಿಯಂತ್ರಣ ಮಾಡಿದರು. ಕೊನೆಯ ಓವರ್‌ನಲ್ಲಿ 15 ರನ್ ಬೇಕಿತ್ತು. ಟ್ರೆಂಟ್ ಬೌಲ್ಟ್ ಎಸೆದ ಮೊದಲ 2 ಎಸೆತದಲ್ಲಿ ಎರಡು ಸಿಂಗಲ್ ರನ್ ಬಂದರೆ ಮೂರನೇ ಎಸೆತದಲ್ಲಿ ರಸೆಲ್ ಬೌಲ್ಟ್‌ಗೆ ಕ್ಯಾಚ್ ನೀಡಿ ಔಟಾದರು. ನಂತರ ಬಂದ ಪ್ಯಾಟ್ ಕಮ್ಮಿನ್ಸ್ ಬೌಲ್ಡ್ ಆದರೆ 5ನೇ ಎಸೆತದಲ್ಲಿ 2 ರನ್ ಬಂತು. ಕೊನೆಯ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ.
ಮೊದಲ ವಿಕೆಟ್ 72 ರನ್ ಬಂದಿದ್ದರೆ ನಂತರ ಮಧ್ಯಮ ಕ್ರಮಾಂಕದಲ್ಲಿ ಕೋಲ್ಕತ್ತಾ ದಿಢೀರ್ ಕುಸಿತ ಕಂಡಿತು. ರಾಹುಲ್ ಚಹರ್ 4 ಓವರ್ ಮಾಡಿ 27 ರನ್ ನೀಡಿ 4 ವಿಕೆಟ್ ಕಿತ್ತಿದ್ದು ಮುಂಬೈಗೆ ನೆರವಾಯಿತು. ನಿತೀಶ್ ರಾಣಾ 57 ರನ್(47 ಎಸೆತ, 6 ಬೌಂಡರಿ, 2 ಸಿಕ್ಸರ್) ಶುಭಮನ್ ಗಿಲ್ 33 ರನ್(24 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.
ಸೂರ್ಯಕುಮಾರ್ ಕಮಾಲ್:
ಮುಂಬೈ ಪರ ಸೂರ್ಯಕುಮಾರ್ ಯಾದವ್ 56 ರನ್(36 ಎಸೆತ, 7 ಬೌಂಡರಿ, 2 ಸಿಕ್ಸರ್), ರೋಹಿತ್ ಶರ್ಮಾ 43 ರನ್(32 ಎಸೆತ 3 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು. ರಸೆಲ್ 5 ವಿಕೆಟ್ ಪಡೆದರೆ ಪ್ಯಾಟ್ ಕಮ್ಮಿನ್ಸ್ 2 ವಿಕೆಟ್, ವರುಣ್ ಚಕ್ರವರ್ತಿ, ಶಕಿಬ್ ಉಲ್ ಹಸನ್, ಪ್ರಸಿದ್ಧ್ ಕೃಷ್ಣ ತಲಾ ಒಂದು ವಿಕೆಟ್ ಪಡೆದರು.
ಆಂಡ್ರೆ ರಸೆಲ್ 2 ಓವರ್ ಎಸೆದು 15 ರನ್ ನೀಡಿ 5 ವಿಕೆಟ್ ಕಿತ್ತು ಮುಂಬೈ ವಿರುದ್ಧ ದಾಖಲೆ ಬರೆದಿದ್ದಾರೆ. ಈ ಮೊದಲು ಆರ್‌ಸಿ ಹರ್ಷಲ್ ಪಟೇಲ್ ಮೊದಲ ಪಂದ್ಯದಲ್ಲಿ 4 ಓವರ್ ಎಸೆದು 27 ರನ್ ನೀಡಿ 5 ವಿಕೆಟ್ ಪಡೆದಿದ್ದರು.