ಕೋಲಾರ: ಬೆಂಗಳೂರಿನಲ್ಲಿ ಸಿಐಡಿ ಡಿವೈಎಸ್‍ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಯಾವುದೇ ರೀತಿಯ ಕೌಟುಂಬಿಕ ಸಮಸ್ಯೆ ಇರಲಿಲ್ಲ ಎಂದು ಸಂಬಂಧಿ ಲೋಕೇಶ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಲಕ್ಷ್ಮಿ ಅವರಿಗೆ ಕೌಟುಂಬಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳು ಇರಲಿಲ್ಲ. ಗಂಡ- ಹೆಂಡತಿ ಚೆನ್ನಾಗಿಯೇ ಇದ್ದರು. ಪ್ರೀತಿಸಿ ಮದುವೆಯಾಗಿದ್ದ ಅವರು ಪೋಷಕರಿಂದ ದೂರವಿದ್ದರೂ ಎಲ್ಲರ ಜೊತೆ ಸಂಪರ್ಕದಲ್ಲಿಯೇ ಇದ್ದರು ಎಂದು ಅವರು ತಿಳಿಸಿದ್ದಾರೆ.
Advertisement
Advertisement
ಕೆಲಸದಲ್ಲಿದ್ದಿದ್ದರಿಂದ ಕಚೇರಿಯಲ್ಲಿ ಏನು ನಡೆದಿದೆ ಎಂಬುದರ ಬಗ್ಗೆ ಗೊತ್ತಿಲ್ಲ. ಮಕ್ಕಳಾಗಿಲ್ಲ ಎಂಬ ಕೊರಗು ಅವರಲ್ಲಿತ್ತು. ಹೀಗಾಗಿ ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.
Advertisement
Advertisement
ಲಕ್ಷ್ಮಿ ತಂದೆ-ತಾಯಿ ಹೆಚ್‍ಆರ್‍ಎಸ್‍ಲೇ ಔಟ್ ನಲ್ಲಿ ವಾಸವಾಗಿದ್ದಾರೆ. ಸದ್ಯ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆಗೆ ತೆರಳಿದ್ದು, ಆತ್ಮಹತ್ಯೆಯ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಳೆದ 8 ವರ್ಷದ ಹಿಂದೆ ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದರು. ಸದ್ಯ ಪೋಷಕರಿಂದ ದೂರ ಇದ್ದ ಲಕ್ಷ್ಮೀ, ಬೆಂಗಳೂರಿನಲ್ಲಿ ವಾಸವಾಗಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ವಗ್ರಾಮ ತುರುವಾಲಟ್ಟಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ತುರುವಾಲಟ್ಟಿ ಗ್ರಾಮದ ಲಕ್ಷ್ಮಿ ಬೆಂಗಳೂರಿನ ತನ್ನ ಸ್ನೇಹಿತನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಇವರ ಆತ್ಮಹತ್ಯೆಯ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.