ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಕೋವಿಡ್ ವಿರುದ್ಧ ಹೋರಾಟದಲ್ಲಿ ಆರೋಗ್ಯ ಮೂಲಸೌಕರ್ಯಕ್ಕಾಗಿ 50 ಸಾವಿರ ಕೋಟಿ ರೂ.ಗಳನ್ನ ಸಾಲದ ರೂಪದಲ್ಲಿ ನೀಡೋದಾಗಿ ಬುಧವಾರ ಹೇಳಿತ್ತು. ಇದರ ಮೊದಲ ಲಾಭ ಕೋವಿಶೀಲ್ಡ್ ತಯಾರಿಕೆಯ ಸೀರಂ ಸಂಸ್ಥೆಗೆ ಲಭ್ಯವಾಗಿದ್ದು, ಬ್ಯಾಂಕ್ ಆಫ್ ಬರೋಡಾ 500 ಕೋಟಿ ರೂ. ಸಾಲ ನೀಡುವ ಬಗ್ಗೆ ನಿರ್ಧರಿಸಿದೆ.
ಭಾರತದಲ್ಲಿ ಮೂರು ಕೊರೊನಾ ಲಸಿಕೆ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಲ್ಲಿ ಕೋವಿಶೀಲ್ಡ್ ಹೆಚ್ಚು ಪೂರೈಕೆಯಾಗುತ್ತಿದ್ದು, ಬಳಕೆಯಾಗ್ತಿದೆ. ಹಾಗಾಗಿ ಕೋವಿಶೀಲ್ಡ್ ಉತ್ಪಾದನೆ ಹೆಚ್ಚಳಕ್ಕೆ ಪೂರಕವಾಗಿ ಬ್ಯಾಂಕ್ ಆಫ್ ಬರೋಡಾ ಸಾಲದ ರೂಪದಲ್ಲಿ ಹಣಕಾಸಿನ ನೆರವು ನೀಡಲು ಮುಂದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೋವ್ಯಾಕ್ಸಿನ್ ತಯಾರಿಕಾ ಕಂಪನಿ ಭಾರತ್ ಬಯೋಟೆಕ್ ಗೆ ಲೋನ್ ನೀಡಲು ಮುಂದಾಗಿದೆ. ಆದ್ರೆ ಸಾಲದ ಮೊತ್ತವನ್ನ ಬಹಿರಂಗಪಡಿಸಿಲ್ಲ.
ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಆರ್ ಬಿಐ, ಕೋವಿಡ್ ಹೋರಾಟದಲ್ಲಿ ಭಾಗಿಯಾಗುತ್ತಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳಿಗೆ ನೆರವು ನೀಡಲಾಗುವುದು. ಬ್ಯಾಂಕ್‍ಗಳು ವ್ಯಾಕ್ಸಿನ್ ತಯಾರಿಕೆ ಕಂಪನಿಗಳು, ಆಮದುದಾರರಿಗೆ, ಆಕ್ಸಿಜನ್ ಪೂರೈಕೆದಾರರಿಗೆ, ಔಷಧಿ ಕಂಪನಿಗಳು, ಲ್ಯಾಬ್, ಆಸ್ಪತ್ರೆಗಳಿಗೂ ಲೋನ್ ಸಿಗಲಿದೆ ಎಂದು ಹೇಳಿತ್ತು. ಈ ಸೌಲಭ್ಯ ಮಾರ್ಚ್ 31, 2022ರವರೆಗೆ ಇರಲಿದೆ ಎಂದು ಆರ್ ಬಿಐ ಹೇಳಿದೆ.