ಬೆಂಗಳೂರು: ನಾಳೆ ರಾಜ್ಯಾದ್ಯಂತ ಕೋವಿಡ್-19 ಲಸಿಕಾ ಮೇಳಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದು, ಮಂಡ್ಯ ಜಿಲ್ಲೆಯಲ್ಲಿ ಲಸಿಕಾ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಚಾಲನೆ ನೀಡಲಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಜೂನ್ 21 ರಂದು ಬೆಳಗ್ಗೆ 10.30ಕ್ಕೆ ಸಚಿವ ಡಾ.ನಾರಾಯಣಗೌಡ ಲಸಿಕಾಕರಣ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಒಟ್ಟು 51 ಸಾವಿರ ಜನರಿಗೆ ಆದ್ಯತೆ ಮೇಲೆ ಲಸಿಕೆ ನೀಡಲಾಗುವುದು. 45 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಮೊದಲು ಲಸಿಕೆ ನೀಡಲಾಗುತ್ತದೆ. 2 ನೇ ಡೋಸ್ ಗೆ ಬಾಕಿ ಇರುವ ಫಲಾನುಭವಿಗಳು, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಹಾಗೂ 18 ರಿಂದ 44 ವರ್ಷ ವಯೋಮಾನದವರನ್ನು ಗುರುತಿಸಿ ಅದರಲ್ಲಿ ದುರ್ಬಲ ಗುಂಪಿನ ಫಲಾನುಭವಿಗಳಿಗೆ ಮತ್ತು ಕೋವ್ಯಾಕ್ಸಿನ್ ಲಸಿಕೆಯ ಮೊದಲನೇ ಡೋಸ್ ಪಡೆಯುವವರಿಗೆ ಲಸಿಕೆಯನ್ನು ನೀಡಲಾಗುವುದು. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಜು.5ರವರೆಗೆ ಲಾಕ್‍ಡೌನ್ ವಿಸ್ತರಣೆ- ಡಿಸಿ ಆದೇಶ
ಜಿಲ್ಲೆಯ ಎಲ್ಲ ಗ್ರಾಮಪಂಚಾಯತ್ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯನ್ನು ನೀಡಲಾಗುವುದು. ಫಲಾನುಭವಿಗಳು ಲಸಿಕಾ ಮೇಳದಲ್ಲಿ ಪಾಲ್ಗೊಂಡು ಕೋವಿಡ್-19 ವಿರುದ್ಧ ಹೋರಾಡಲು ಲಸಿಕೆಯನ್ನು ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಡುಪಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 4 ಕಾಲು ಸೇತುವೆ ರಚನೆಗೆ ಕೇಂದ್ರದಿಂದ ಅನುದಾನ ಬಿಡುಗಡೆ: ಶೋಭಾ ಕರಂದ್ಲಾಜೆ