ಬೀದರ್: ಕೊರೊನಾದಿಂದ ಪೋಷಕರ ಕಳೆದುಕೊಂಡು ಅನಾಥರಾದ ಮಕ್ಕಳನ್ನು ದತ್ತು ಪಡೆಯಲು ಭಾಲ್ಕಿ ಹೀರೆಮಠ ಸಂಸ್ಥಾನ ಮುಂದಾಗಿದೆ.
ಭಾಲ್ಕಿ ಹೀರೆಮಠ ಸಂಸ್ಥಾನದ ಪೀಠಾಧಿಪತಿ ಡಾ. ಬಸವಲಿಂಗ ಪಟ್ಟದ್ದೆವರು ಈ ಮಹತ್ವದ ನಿರ್ಧಾರ ಮಾಡಿದ್ದಾರೆ. ಇದರಿಂದಾಗಿ ನಿರ್ಗತಿಕ ಹಾಗೂ ಅನಾಥ ಮಕ್ಕಳಲ್ಲಿ ಆಶಾಕಿರಣ ಮೂಡಿದೆ. ಈ ಕ್ರೂರಿ ಕೊರೊನಾ ಅಬ್ಬರಿಸುತ್ತಿರುವ ಸಮಯದಲ್ಲಿ ಅನಾಥ ಮಕ್ಕಳ ರಕ್ಷಣೆಗೆ ಮುಂದಾದ ಭಾಲ್ಕಿ ಹೀರೆಮಠ ಸಂಸ್ಥಾನದ ಕಾರ್ಯ ಮಾನವೀಯ ಮೌಲ್ಯಗಳನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.
2010ರಿಂದಲೂ ಅನಾಥ ಮಕ್ಕಳಿಗೆ ದಾರಿ ದೀಪವಾಗಿರುವ ಭಾಲ್ಕಿ ಹೀರೆಮಠ ಸಂಸ್ಥಾನ ಇಲ್ಲಿಯವರೆಗೆ 85 ಅನಾಥ ಮಕ್ಕಳಿಗೆ ದಾರಿ ದೀಪವಾಗಿದೆ. 85 ಮಕ್ಕಳಲ್ಲಿ 30 ಮಕ್ಕಳು ಮಾತ್ರ ಮಠದಲ್ಲಿ ಆಶ್ರಯ ಪಡೆಯುತ್ತಿದ್ದು, ಉಳಿದ 55 ಮಕ್ಕಳನ್ನು ಹಲವು ದಂಪತಿ ದತ್ತು ಪಡೆದಿದ್ದಾರೆ.
ರಾಜ್ಯದ ಯಾವುದೇ ಜಿಲ್ಲೆಯಲ್ಲಿರುವ ಅನಾಥ ಹಾಗೂ ನಿರ್ಗತಿಕ ಮಕ್ಕಳನ್ನು ದತ್ತು ಪಡೆಯಲು ನಿರ್ಧಾರ ಮಾಡಲಾಗಿದೆ. ಈ ರೀತಿಯ ಅನಾಥ ಮಕ್ಕಳು ರಾಜ್ಯದಲ್ಲಿ ಎಲ್ಲೆ ಕಂಡು ಬಂದರೂ, ನಮ್ಮ ಸಂಸ್ಥಾನವನ್ನು ಸಂಪರ್ಕಿಸಿ ಎಂದು ಹೀರೆಮಠ ಸಂಸ್ಥಾನದ ಶ್ರೀಗಳು ಮನವಿ ಮಾಡಿಕೊಂಡಿದ್ದಾರೆ.
ಮೊದಲಿನಿಂದಲೂ ಅನಾಥ ಮಕ್ಕಳಿಗೆ ದಾರಿ ದೀಪವಾಗಿರುವ ಭಾಲ್ಕಿ ಹೀರೆಮಠ ಸಂಸ್ಥಾನ ಈ ಕೋವಿಡ್ ಸಮಯದಲ್ಲಿ ಅನಾಥ ಮಕ್ಕಳನ್ನು ದತ್ತು ಪಡೆಯಲು ಮುಂದಾಗಿ ಮಾನವೀಯತೆಯ ಸಂದೇಶವನ್ನು ಸಾರಿದೆ.