ಕೋವಿಡ್ ಹತೋಟಿಗೆ ಸಿಐಐ ಸಹಯೋಗದಲ್ಲಿ ಟಾಸ್ಕ್ ಫೋರ್ಸ್ 

Public TV
2 Min Read
sudhakar corona meeting

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕದ ಪರಿಸ್ಥಿತಿಯನ್ನು ಸಮರ್ಥವಾಗಿ ಹತೋಟಿಗೆ ತರಲು ಕಾನ್ಫಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಸಹಯೋಗದಲ್ಲಿ ಟಾಸ್ಕ್ ಫೋರ್ಸ್ ರಚಿಸಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಸಚಿವ ಡಾ.ಕೆ.ಸುಧಾಕರ್, ಸಿಐಐ ಪ್ರತಿನಿಧಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು. ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿಯನ್ನು ನಿಯಂತ್ರಿಸಲು ಸಿಐಐ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಟಾಸ್ಕ್ ಫೋರ್ಸ್  ರಚಿಸಲಾಗುತ್ತದೆ. ಈ ಸಮಿತಿಯು ವೈದ್ಯಕೀಯ ಹಾಗೂ ಇತರೆ ಮೂಲಸೌಕರ್ಯಗಳನ್ನು ಬಲಪಡಿಸುವ ಕಾರ್ಯ ಮಾಡಲಿದೆ. ಕೊರೊನಾ ಕುರಿತ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಕಾಲ್ ಸೆಂಟರ್, ಮಾಡ್ಯೂಲರ್ ಐಸಿಯುಗಳ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳಲ್ಲಿ ಟಾಸ್ಕ್ ಫೋರ್ಸ್  ಮುಂದಾಳತ್ವ ವಹಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಆರೋಗ್ಯ ವಲಯದಲ್ಲಿ ತಂತ್ರಜ್ಞಾನ ಬಳಕೆ, ಔಷಧಿಗಳ ಪೂರೈಕೆ, ವೈದ್ಯಕೀಯ ಸಾಧನ, ಉಪಕರಣಗಳ ಪೂರೈಕೆ, ತಂತ್ರಾಂಶ ಒದಗಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಟಾಸ್ಕ್ ಫೋರ್ಸ್  ರಾಜ್ಯ ಸರ್ಕಾರಕ್ಕೆ ನೆರವು ನೀಡಲಿದೆ.

ಕಾಲ್ ಸೆಂಟರ್:
ಕೋವಿಡ್ ನಿರ್ವಹಣೆ ಮಾಡಲು ಕೆಲ ಸಹಾಯವಾಣಿಗಳಿವೆ. ಆದರೆ ಇದರಿಂದಾಗಿ ಜನರಿಂದ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಇದಕ್ಕಾಗಿ ಒಂದು ಬೃಹತ್ ಕಾಲ್ ಸೆಂಟರ್ ನಿರ್ಮಿಸಿ ಎಲ್ಲವನ್ನೂ ಸಮನ್ವಯಗೊಳಿಸುವ ವ್ಯವಸ್ಥೆ ತರಬೇಕಿದೆ. ಈ ಕಾರ್ಯವನ್ನು ಟಾಸ್ಕ್ ಫೋರ್ಸ್ಗೆ ವಹಿಸಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ತಜ್ಞರು ಸಹಾಯವಾಣಿ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ.

ಸಭೆಯಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಈ ಟಾಸ್ಕ್ ಫೋರ್ಸ್ ಕೋವಿಡ್ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆ ಕುರಿತಾಗಿ ಸರ್ಕಾರಕ್ಕೆ ನೆರವು ನೀಡಲಿದೆ. ಕೋವಿಡ್ ರೋಗಿಗಳಿಗಾಗಿ ರಾಜ್ಯದಲ್ಲಿ 3,000-5,000 ಮಾಡ್ಯೂಲರ್ ಐಸಿಯು ಹಾಸಿಗೆ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೂ ಟಾಸ್ಕ್ ಫೋರ್ಸ್ ನೆರವಾಗಲಿದೆ. ಕೆಲ ಕಂಪನಿಗಳು ಕೇವಲ 7-10 ದಿನಗಳಲ್ಲಿ ಇಂತಹ ಐಸಿಯು ರೂಪಿಸುವುದಾಗಿ ತಿಳಿಸಿವೆ ಎಂದು ತಿಳಿಸಿದರು.

corona virus 1

ಕಂಪನಿಗಳ ಸಿಎಸ್ ಆರ್ ಅನುದಾನವನ್ನು ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಸಲಹೆ ನೀಡಿದೆ. ಎಲ್ಲ ಉದ್ಯಮಗಳು ಸಿಎಸ್ ಆರ್ ಅನುದಾನವನ್ನು ಕೊರೊನಾ ನಿಯಂತ್ರಣಕ್ಕೆ ನೀಡಬೇಕು. ಅದಕ್ಕಿಂತ ಹೆಚ್ಚಾಗಿ ತಂತ್ರಜ್ಞಾನದ ನೆರವು ನೀಡಬೇಕು. 95% ರೋಗಿಗಳು ಮನೆ ಆರೈಕೆಯಲ್ಲಿದ್ದು, ಅವರಿಗೆ ತಂತ್ರಜ್ಞಾನದ ಮೂಲಕ ಮಾರ್ಗದರ್ಶನ ನೀಡಲು ತಂತ್ರಜ್ಞಾನ ಅಗತ್ಯ. ಹಾಗೆಯೇ ರೆಮ್ ಡಿಸಿವಿರ್, ಟೊಸಿಲಿಜುಮಾಬ್ ಔಷಧಿಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲು ನೆರವಾಗಬೇಕು ಎಂದು ಸಚಿವರು ಮನವಿ ಮಾಡಿದರು.

ಸಿಐಐ ಮಾಜಿ ಅಧ್ಯಕ್ಷರಾದ ಕ್ರಿಸ್ ಗೋಪಾಲಕೃಷ್ಣನ್, ವಿಕ್ರಮ್ ಕಿರ್ಲೋಸ್ಕರ್, ಖ್ಯಾತ ವೈದ್ಯ ಡಾ.ದೇವಿಶೆಟ್ಟಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *