– ಕೊರೊನಾ ಮರೆಮಾಚಲು ರಾಮಮಂದಿರ ನಿರ್ಮಾಣ
ಚಿಕ್ಕಬಳ್ಳಾಪುರ: ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಸ್ವತಃ ಸರ್ಕಾರದ ಆರು ಮಂದಿ ಕ್ಯಾಬಿನೆಟ್ ಸಚಿವರು ಸೋಂಕಿಗೆ ಒಳಗಾಗಿದ್ದಾರೆ. ಒಬ್ಬರು ಸಾವನ್ನಪ್ಪಿರುವ ಮಾಹಿತಿ ಇದೆ. ಅಲ್ಲದೆ ಸ್ವಾಮೀಜಿಯೊಬ್ಬರು ಸಹ ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಈ ಸಮಯದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯದ ಅಡಿಗಲ್ಲು ಕಾರ್ಯಕ್ರಮ ಬೇಕಿತ್ತಾ ಎಂದು ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಪ್ರಶ್ನಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ಆದೇಶದಂತೆ ರಾಮಮಂದಿರ ಕಟ್ಟಲಿ ಆದರೆ ಈಗ ಬೇಕಿತ್ತಾ, ನಮ್ಮ ಮೊದಲ ಆದ್ಯತೆ ಕೊರೊನಾ ನಿಯಂತ್ರಣ ಮಾಡುವದರ ಮೇಲಿರಬೇಕಿತ್ತು. ಆದರೆ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡುವುದ ಮೇಲಿದೆ. ಕೊರೊನಾ ನಿಯಂತ್ರಣದ ವೈಫಲ್ಯ ಮುಚ್ಚಿ ಹಾಕಲು, ಜನರನ್ನು ವಿಷಯಾಂತರ ಮಾಡಲು ಕೇಂದ್ರ ಸರ್ಕಾರ ರಾಮ ಮಂದಿರ ಭೂಮಿ ಪೂಜೆ ಮಾಡುತ್ತಿದೆ ಎಂದು ಹರಿಹಾಯ್ದರು.
ಕೊರೊನಾ ಸಂಕಷ್ಟದ ಸಮಯದಲ್ಲಿ ಹಲವರು ಪಿಎಂ ಕೇರ್ಸ್ ಫಂಡ್ ಗೆ ದೇಣಿಗೆ ನೀಡಿದ್ದಾರೆ. ಅದ್ಯಾವುದರ ಲೆಕ್ಕವನ್ನು ಕೇಂದ್ರ ಸರ್ಕಾರ ಕೊಡುತ್ತಿಲ್ಲ. ಪದೇ ಪದೇ ಮನ್ ಕೀ ಬಾತ್ ಅಂತ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದ ಮೋದಿಯವರು, ಈಗ ಮೌನವಾಗಿದ್ದಾರೆ. ಕೋವಿಡ್-19 ವಿಚಾರ ಡೈವರ್ಟ್ ಮಾಡಲು ರಾಮ ಮಂದಿರ ನಿರ್ಮಾಣ ಕಾರ್ಯ ಶುರುವಿಟ್ಟುಕೊಂಡಿದ್ದಾರೆ ಎಂದರು.