ಚಿತ್ರದುರ್ಗ: ಕೋವಿಡ್ ವೇಳೆ ಶೈಕ್ಷಣಿಕ ಕ್ಷೇತ್ರದಲ್ಲಿ ಪಬ್ಲಿಕ್ ಟಿವಿ ಜ್ಞಾನ ದೀವಿಗೆ ಅಭಿಯಾನದ ಮೂಲಕ ಇತಿಹಾಸ ಸೃಷ್ಟಿಸಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಮೆಚ್ಚುಗೆ ಸೂಚಿಸಿದರು.
ಪಬ್ಲಿಕ್ ಟಿವಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ನಡೆಯುತ್ತಿರುವ ಟ್ಯಾಬ್ ವಿತರಣೆ ಕಾರ್ಯಕ್ರಮ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗೂಳಿಹಟ್ಟಿ ಗ್ರಾಮದಲ್ಲಿ ನಡೆಯಿತು. ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ಶಿಕ್ಷಣ ಪ್ರೇಮಿಗಳ ನೇತೃತ್ವದಲ್ಲಿ ಗೂಳಿಹಟ್ಟಿ ಪ್ರೌಢಶಾಲೆ ಮತ್ತು ನಾಗತಿಹಳ್ಳಿ ಸರ್ಕಾರಿ ಶಾಲೆಯ 80 ಜನ ವಿದ್ಯಾರ್ಥಿಗಳಿಗೆ 40 ಟ್ಯಾಬ್ ಗಳನ್ನು ಇಂದು ವಿತರಿಸಲಾಯಿತು.
Advertisement
Advertisement
ಟ್ಯಾಬ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಗೂಳಿಹಟ್ಟಿ ಶೇಖರ್ ಅವರು, ಕೋವಿಡ್ ನಿಂದಾಗಿ ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಆಸಕ್ತಿ ತುಂಬಾ ಹಿನ್ನಡೆಯಾಗಿತ್ತು. ಈ ವೇಳೆ ಪಬ್ಲಿಕ್ ಟಿವಿ ರಾಜ್ಯದ ಇತಿಹಾಸದಲ್ಲಿ ಉಳಿಯುವಂತಹ ದೊಡ್ಡ ಅಭಿಯಾನ ಮಾಡಿದೆ. ಪಾಠ ಕೇಳಲಾಗದೇ ಗೊಂದಲಕ್ಕೀಡಾಗಿದ್ದ ಬಡ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ಯಶಸ್ವಿಯಾಗಿದೆ. ಅವರಿಗೆ ಹೊಸದುರ್ಗ ಕ್ಷೇತ್ರ ಹಾಗೂ ಗೂಳಿಹಟ್ಟಿ ಗ್ರಾಮದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
Advertisement
Advertisement
ಇದೇ ವೇಳೆ ಎಲ್ಲಾ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿ, ಮಾತನಾಡಿದ ದಾನಿಗಳಲ್ಲೊಬ್ಬರಾದ ಹೊಸದುರ್ಗ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯ್ಯಪ್ಪ ಸಹ, ಕೋವಿಡ್ ಮಹಾ ಮಾರಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡುವ ಮೂಲಕ ಪಬ್ಲಿಕ್ ಟಿವಿ ದೊಡ್ಡ ಕ್ರಾಂತಿ ಮಾಡ್ತಿದೆ. ಕರ್ನಾಟಕ ರಾಜ್ಯಾದ್ಯಂತ ಸಮರೋಪಾದಿಯಾಗಿ ನಡೆಯುತ್ತಿರುವ ಈ ಟ್ಯಾಬ್ ವಿತರಣೆ ಕಾರ್ಯ ಶ್ಲಾಘನೀಯ ಎಂದರು.
ವಿದ್ಯಾರ್ಥಿಗಳು ಕೂಡ ಟ್ಯಾಬ್ ಪಡೆದು ಸಂತಸದಿಂದ ಪುಳಕಿತರಾಗಿದ್ದರು. ಈ ವೇಳೆ ಅವರ ಅನಿಸಿಕೆ ತಿಳಿಸಿದ ವಿದ್ಯಾರ್ಥಿಗಳಾದ ಅವಿನಾಶ್, ವಿನಯ್ ಮತ್ತು ಪೂಜಾ ಕೋವಿಡ್ ಸಂಕಷ್ಟದ ವೇಳೆ ನಾವು ಆನ್‍ಲೈನ್ ಪಾಠದಿಂದ ವಂಚಿತರಾಗಿದ್ದೇವು. ಶಾಲೆಯಲ್ಲಿ ಪಾಠ ಕೇಳಲಾಗದೇ ಆತಂಕಗೊಂಡಿದ್ದೇವು. ಅಲ್ಲದೇ ಆನ್‍ಲೈನ್ ಪಾಠ ಕೇಳಲು ಕರೆಂಟ್ ಸಮಸ್ಯೆ, ಕೇಬಲ್ ಸಮಸ್ಯೆ ಹಾಗು ನೆಟ್ ವರ್ಕ್ ಸಮಸ್ಯೆ ಎದುರಾಗಿತ್ತು. ಹೀಗಾಗಿ ಪಾಠ ಕೇಳದೇ ಪರೀಕ್ಷೆ ಹೇಗೆ ಬರೆಯೋದೆಂಬ ಭಯ ನಮ್ಮಲ್ಲಿತ್ತು. ಇಂತಹ ಸಮಯದಲ್ಲಿ ಪಬ್ಲಿಕ್ ಟಿವಿ ನಮಗೆ ಟ್ಯಾಬ್ ವಿತರಿಸಿ ಉತ್ತಮಕಾರ್ಯ ಮಾಡಿದೆ. ಆದ್ದರಿಂದ ಪಬ್ಲಿಕ್ ಟಿವಿ ಹಾಗೂ ಟ್ಯಾಬ್ ದಾನಿಗಳಾದ ಶಾಸಕ ಶೇಖರ್ ಅವರಿಗೆ ಧನ್ಯವಾದ ತಿಳಿಸಿದರು. ಜೊತೆಗೆ ನಾವುಗಳು ಈ ಟ್ಯಾಬ್ ಗಳ ಸಹಾಯದಿಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುತ್ತೇವೆ. ಶಾಲೆಗೆ, ಶಿಕ್ಷಕರಿಗೆ ಹಾಗೂ ನಮಗೆ ನೆರವಾದ ಎಲ್ಲರಿಗೂ ಒಳ್ಳೆಯ ಹೆಸರು ತರುತ್ತೇವೆಂದು ಪ್ರಮಾಣ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್.ಡಿ ಎಂಸಿ ಅಧ್ಯಕ್ಷ ಸಿದ್ದಪ್ಪ, ತಾಪಂ ಸದಸ್ಯ ಕೃಷ್ಣಮೂರ್ತಿ, ಮುಖ್ಯ ಶಿಕ್ಷಕರಾದ ಸೂರಜ್ ಕುಮಾರ್ ಹಾಗೂ ತಿಪ್ಪೇಸ್ವಾಮಿ, ಶಿಕ್ಷಕಿಯರಾದ ಹೇಮಲತ, ಮಮತ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.