ಕೋವಿಡ್ ಭಯ, ಆರ್ಥಿಕ ಸಂಕಷ್ಟ- ಚಾಮರಾಜನಗರ ಜಿಲ್ಲೆಯಲ್ಲಿ ದಾಖಲಾಗಿಲ್ಲ 4,605 ವಿದ್ಯಾರ್ಥಿಗಳು

Public TV
2 Min Read
CNG SCHOOL 1 768x614 1

ಚಾಮರಾಜನಗರ: ಕೊರೊನಾ ಭೀತಿಯಿಂದಾಗಿ ರಾಜ್ಯದಲ್ಲಿ ಶಾಲೆಗಳನ್ನು ಯಾವಾಗ? ಹೇಗೆ ಆರಂಭಿಸಬೇಕು ಎಂಬ ಗೊಂದಲ ಮುಂದುವರಿದಿದೆ. ಈ ನಡುವೆ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಳೆದ ಬಾರಿಗಿಂತ ಈ ವರ್ಷ ದಾಖಲಾತಿ ಪ್ರಮಾಣ ಕುಸಿದಿದೆ. ಚಾಮರಾಜನಗರ ಜಿಲ್ಲೆಯೊಂದರಲ್ಲೇ ಈ ಬಾರಿ 4,605 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.

CORONA VIRUS 13

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕು ಪರಿಣಾಮ ಶಾಲಾ ದಾಖಲಾತಿಯ ಮೇಲು ಬೀರಿದೆ. ಶಾಲೆಗಳನ್ನು ಯಾವಾಗ ಹೇಗೆ ಆರಂಭಿಸಬೇಕು ಎಂಬ ಗೊಂದಲದಲ್ಲೇ ಮುಳುಗಿರುವ ಸರ್ಕಾರ, ಸೆಪ್ಟೆಂಬರ್ 30ರೊಳಗೆ ಮಕ್ಕಳ ದಾಖಲಾತಿ ಪ್ರಕ್ರಿಯೆ ಮುಗಿಸಬೇಕು ಎಂದು ಆದೇಶ ಹೊರಡಿಸಿತ್ತು. ನಂತರ ಈ ದಿನಾಂಕವನ್ನು ಅಕ್ಟೋಬರ್ 16 ರವರೆಗೂ ವಿಸ್ತರಿಸಿತ್ತು. ಇದೀಗ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಳೆದ ಬಾರಿಗಿಂತ ಈ ಬಾರಿ ದಾಖಲಾತಿ ಪ್ರಮಾಣ ಕುಸಿದಿದೆ.

ಚಾಮರಾಜನಗರ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ 1,26,994 ಮಕ್ಕಳು ದಾಖಲಾಗಿದ್ದರು. ಆದರೆ ಈ ಬಾರಿ ಅಂದರೆ 2020-21ನೇ ಸಾಲಿಗೆ 1,22,389 ಮಕ್ಕಳು ದಾಖಲಾಗಿದ್ದು, ಈ ಬಾರಿ 4,605 ಮಕ್ಕಳು ಶಾಲೆಗಳಿಗೆ ಪ್ರವೇಶ ಪಡೆದಿಲ್ಲ. ಅಂಕಿ ಅಂಶಗಳ ಪ್ರಕಾರ ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಾಖಲಾತಿ ಕುಸಿದಿರುವುದು ಕಂಡು ಬಂದಿದೆ.

Private School Students

ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಕೊರೊನಾ ಸೋಂಕು ತಗುಲಬಹುದೆಂಬ ಭೀತಿ ಪೋಷಕರನ್ನು ಕಾಡುತ್ತಿದೆ. ಇನ್ನೊಂದೆಡೆ ಲಾಕ್‍ಡೌನ್ ಪರಿಣಾಮ ಆರ್ಥಿಕ ಸಂಕಷ್ಟವೂ ಎದುರಾಗಿರುವುದರಿಂದ ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸಲು ಪೋಷಕರು ಹಿಂದೇಟು ಹಾಕಿದ್ದಾರೆ. ಒಂದು ವರ್ಷ ಹೋದರು ಪರವಾಗಿಲ್ಲ ಮುಂದಿನ ವರ್ಷ ಶಾಲೆಗೆ ಸೇರಿಸೋಣ ಎಂಬ ತೀರ್ಮಾನಕ್ಕೂ ಕೆಲವು ಪೋಷಕರು ಬಂದಿದ್ದಾರೆ. ಅಲ್ಲದೆ ಕಳೆದ ವರ್ಷದಂತೆ ಈ ವರ್ಷವೂ ತಮ್ಮ ಮಕ್ಕಳನ್ನು ಮುಂದಿನ ತರಗತಿಗೆ ಪಾಸ್ ಮಾಡುತ್ತಾರೆ. ಶುಲ್ಕಕಟ್ಟಿ ದಾಖಲು ಮಾಡುವುದು ವ್ಯರ್ಥ ಎಂಬ ಭಾವನೆಯೂ ಕೆಲ ಪೋಷಕರಲ್ಲಿದೆ. ಹೀಗೆ ನಾನಾ ಕಾರಣಗಳಿಂದ ಶಾಲೆಗಳಲ್ಲಿ ದಾಖಲಾತಿ ಕುಸಿದಿದೆ.

Private School Students 1

ಶಾಲಾ ದಾಖಲಾತಿ ಕುಸಿತದ ನಡುವೆಯು ಈ ವರ್ಷ ಸರ್ಕಾರಿ ಶಾಲೆಗಳ ಪ್ರವೇಶಾತಿ ಹೆಚ್ಚಳವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 769ಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಪಡೆದಿದ್ದಾರೆ. ಒಟ್ಟಾರೆ ಕೋವಿಡ್-19 ನಾನಾ ಆವಾಂತರಗಳನ್ನು ಸೃಷ್ಟಿಸುತ್ತಿದ್ದು ಶೈಕ್ಷಣಿಕ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ.

Share This Article
Leave a Comment

Leave a Reply

Your email address will not be published. Required fields are marked *