ರಾಯಚೂರು: ಕೋವಿಡ್ ಸೋಂಕು ತಗುಲಿದ ಮಕ್ಕಳಲ್ಲಿ ಗುಣಮುಖರಾದ ಮೂರ್ನಾಲ್ಕು ವಾರಗಳ ಬಳಿಕ ಕಾಣಿಸಿಕೊಳ್ಳುವ ಹಿಮೋಫ್ಯಾಗೋಸೈಟಿಕ್ ಲಿಂಫೋಹಿಸ್ಟಿಯೋಸಿಸ್(ಎಚ್‍ಎಲ್‍ಎಚ್) ಸಮಸ್ಯೆಯ ಮೊದಲ ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಎಚ್‍ಎಲ್‍ಎಚ್ ನಿಂದ ಬಳಲುತ್ತಿದ್ದ 5 ವರ್ಷದ ಮಗು ಈಗ ಗುಣಮುಖವಾಗಿದೆ ಅಂತ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಜಿಲ್ಲೆಯಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣಕ್ಕೆ ವೈದ್ಯರ ಚಿಕಿತ್ಸೆ ಯಶಸ್ವಿಯಾಗಿದೆ. ನಗರದ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹೆಣ್ಣು ಮಗು ಕಳೆದ 9 ದಿನಗಳಿಂದ ಚಿಕಿತ್ಸೆ ಪಡೆದು ಗುಣಮುಖಳಾಗಿದ್ದಾಳೆ.
ಹಿಮೋಫ್ಯಾಗೋಸೈಟಿಕ್ ಲಿಂಫೋಹಿಸ್ಟಿಯೋಸಿಸ್ (ಎಚ್‍ಎಲ್‍ಎಚ್) ಸಮಸ್ಯೆ ಅತಿ ವಿರಳವಾಗಿ ಕಾಣಿಸಿಕೊಳ್ಳುವ ಬಿಕ್ಕಟ್ಟಾಗಿದೆ. ವಿಪರೀತ ಜ್ವರ, ವಾಂತಿ ಭೇದಿ, ಹೊಟ್ಟೆನೋವು ಇದರ ಲಕ್ಷಣಗಳು. ಬಿಳಿ ರಕ್ತಕಣ, ಪ್ಲೇಟ್ ಲೆಟ್ ಸಂಖ್ಯೆ ಗಣನೀಯ ಇಳಿಕೆ, ಸಿಆರ್ ಪಿ ಹೆಚ್ಚಳದಿಂದ ಮಕ್ಕಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ರಿಮ್ಸ್ ನ ಪಿಐಸಿಯು ನಲ್ಲಿ ಚಿಕಿತ್ಸೆ ಪಡೆದ ಮಗು ಈಗ ಸಂಪೂರ್ಣ ಗುಣಮುಖಳಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಇನ್ನೂ ಕೋವಿಡ್ ಬಳಿಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಸಮಸ್ಯೆ ಮಲ್ಟಿಪಲ್ ಇಂಫ್ಲಾಮೆಟರಿ ಸಿಂಡ್ರೋಮ್ (ಎಂಐಎಸ್) ಜಿಲ್ಲೆಯ ಇಬ್ಬರು ಮಕ್ಕಳಲ್ಲಿ ಕಾಣಿಸಿಕೊಂಡಿತ್ತು. ಎರಡು ಎಂಐಎಸ್ ಪ್ರಕರಣಗಳಲ್ಲೂ ಮಕ್ಕಳು ಗುಣಮುಖರಾಗಿದ್ದಾರೆ. ಸಮಸ್ಯೆಗಳನ್ನ ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಮಕ್ಕಳು ಬೇಗ ಗುಣಮುಖರಾಗುತ್ತಾರೆ ಅಂತ ವೈದ್ಯರು ತಿಳಿಸಿದ್ದಾರೆ.