ಬೆಂಗಳೂರು: ಮಹಾಮಾರಿ, ಚೀನಿ ವೈರಸ್ ದೇಶಕ್ಕೆ ವಕ್ಕರಿಸಿ ಬರೋಬ್ಬರಿ 6 ತಿಂಗಳುಗಳೇ ಕಳೆದು ಹೋಗಿದೆ. ಆದರೂ ಸಿಲಿಕಾನ್ ಸಿಟಿಯಲ್ಲಿರುವ ಇಎಸ್‍ಐ ಆಸ್ಪತ್ರೆಯ ಚಿತ್ರಣ ಮಾತ್ರ ಇನ್ನೂ ಬದಲಾಗಿಲ್ಲ.
ಹೌದು. ಬೆಂಗಳೂರಿನ ರಾಜಾಜಿನಗರದ ಇಎಸ್ ಐ ಆಸ್ಪತ್ರೆಗೆ ಅನಾರೋಗ್ಯ ಬಂದಿದೆ ಅಂತಾನೇ ಹೇಳಬಹುದು. ಯಾಕಂದರೆ ಇಲ್ಲಿನ ವೈದ್ಯರು, ಸ್ಟಾಫ್ ನರ್ಸ್ ಗಳಿಗೆ ಸೋಂಕು ಹರಡುತ್ತಿದ್ದರೂ ಆಸ್ಪತ್ರೆ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಸಿಬ್ಬಂದಿ ಆಸ್ಪತ್ರೆಯ ಡೀನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇಲ್ಲಿಯವರೆಗೆ ಇಎಸ್‍ಐ ಆಸ್ಪತ್ರೆಯ 93 ಸಿಬ್ಬಂದಿ ಕೋವಿಡ್-19 ಸೋಂಕಿಗೆ ತುತ್ತಾಗಿದ್ದಾರೆ. ಮೊನ್ನೆ ಮೊನೆಯಷ್ಟೇ ಇಎಸ್ ಐ ಆಸ್ಪತ್ರೆಯ ವೈದ್ಯರು ಕೂಡ ಕೊರೊನಾಗೆ ಬಲಿಯಾಗಿದ್ರು. ಆದರೂ ಆಸ್ಪತ್ರೆ ಮಾತ್ರ ಇನ್ನೂ ಬುದ್ಧಿ ಕಲಿತಿಲ್ಲ. ಆರೋಗ್ಯ ಸಿಬ್ಬಂದಿಗೆ ಸರಿಯಾದ ಮಾಸ್ಕ್ ಕೂಡ ಕೊಡೋಕೆ ಆಗುತ್ತಿಲ್ಲ. ಹೀಗಾಗಿ ಕೊರೊನಾ ವಾರಿಯರ್ಸ್ ಗಳು ಮಾಸ್ಕ್ ಕೊಡಿ ಅಂತ ಪದೇ ಪದೇ ಮನವಿ ಮಾಡುವ ಶೋಚನೀಯ ಸ್ಥಿತಿ ಎದುರಾಗಿದೆ.
ಕೋವಿಡ್ ವಾರ್ಡ್ ಒಳಗೆ ಹೋಗೋರಿಗೆ ಮಾತ್ರ ಎನ್ 95 ಮಾಸ್ಕ್ ಕೊಡುತ್ತಾರೆ. ನಾನ್ ಕೋವಿಡ್ ಡ್ಯೂಟಿ ಮಾಡೋರಿಗೆ ವಾರಕ್ಕೊಂದು ಎನ್ 95 ಬಳಸಿ ಅಂತ ಹೇಳುತ್ತಿದ್ದಾರೆ. ಇದರಿಂದಾಗಿ ಆಸ್ಪತ್ರೆ ಸಿಬ್ಬಂದಿಗೆ ಸೋಂಕು ಹೆಚ್ಚಳವಾಗುತ್ತಿದೆ ಎಂದು ಆಸ್ಪತ್ರೆ ಡೀನ್ ಜಿತೇಂದ್ರ ಕುಮಾರ್ ವಿರುದ್ಧ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.