– ವ್ಯಾಕ್ಸಿನ್ 2ನೇ ಡೋಸ್ ಪಡೆದ ಬಿಬಿಎಂಪಿ ಆಯುಕ್ತ
ಬೆಂಗಳೂರು: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದಿದ್ದಾರೆ. ಜೆ.ಸಿ ನಗರ ವಾರ್ಡ್-46 ರ ಎಂ.ಆರ್.ಪಾಳ್ಯದ ನಗರ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದರು. ಫೆ.9 ರಂದು ಕೋವಿಶೀಲ್ಡ್ ಲಸಿಕೆ ಪಡೆದಿದ್ದು, ಇಂದು 28 ದಿನಗಳು ಕಳೆದ ಮೇಲೆ ಮತ್ತೆ ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ.
ಲಸಿಕೆ ಪಡೆದ ಬಳಿಕ ಮಾತನಾಡಿದ ಆಯುಕ್ತರು, ನಗರದಲ್ಲಿ ನಿತ್ಯ 75 ಸಾವಿರ ಮಂದಿಗೆ ಕೊರೊನಾ ವ್ಯಾಕ್ಸಿನ್ ಕೊಡಲು ಸಿದ್ಧತೆ ನಡೆದಿದೆ. ಹಿಂದೆ 30 ಸಾವಿರ ಮಂದಿಗೆ ಲಸಿಕೆ ಹಾಕಲಾಗುತ್ತಿತ್ತು. ನಿನ್ನೆ ಹಬ್ಬ ಇದ್ದ ಕಾರಣ ಕಡೆಯಾಗಿದೆ. 30 ಹಾಸಿಗೆಗಳಿರುವ ಆಸ್ಪತ್ರೆಗೆ ವಿಸ್ತರಣೆ ಮಾಡಲೂ ಕ್ರಮ ಕೈಗೊಳ್ಳಲಾಗಿದೆ. ಇದಾದರೆ ಒಟ್ಟು 500 ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಬಹುದು. ಮುಂದಿನ ದಿನಗಳಲ್ಲಿ 1 ಲಕ್ಷ ಜನರಿಗೆ ಲಸಿಕೆ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದರು.
ಬಡವರು, ಆನ್ಲೈನ್ ರಿಜಿಸ್ಟ್ರೇಶನ್ ಮಾಡಲು ಆಗದವರಿಗೂ ಲಸಿಕೆ ನೀಡಲಾಗುತ್ತದೆ. ಆಶಾ ಕಾರ್ಯಕರ್ತೆಯರು ಜನರ ಪ್ರದೇಶಕ್ಕೆ ಹೋಗಿ ಲಸಿಕೆ ಕೊಡುವ ಕೆಲಸ ಆಗ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಲಸಿಕೆ ಹಾಕಿಸ್ತಾ ಇದ್ದಾರೆ ಎಂದರು.
ಕೊರೊನಾ ಪ್ರಕರಣದಲ್ಲಿ ನಿತ್ಯ ಏರಿಕೆ:
ಕೊರೊನಾ ಪ್ರಕರಣದಲ್ಲಿ ನಿತ್ಯ ಏರಿಕೆ ಕಾಣುತ್ತಿದ್ದು, ಡಿಸೆಂಬರ್, ಜನವರಿ, ಫೆಬ್ರವರಿಗಿಂತ ಮಾರ್ಚ್ ನಲ್ಲಿ ಕೇಸ್ ಗಳ ಸಂಖ್ಯೆ ಹೆಚ್ಚಳ ಕಂಡಿದೆ. ಡಿಸೆಂಬರ್ ನಲ್ಲಿ ದಿನವೊಂದಕ್ಕೆ 600 ಪ್ರಕರಣ ಇತ್ತು. ಜನವರಿಯಲ್ಲಿ ಸರಾಸರಿ 333 ಕ್ಕೆ ಇಳಿಕೆಯಾಗಿತ್ತು, ಫೆಬ್ರವರಿಯಲ್ಲಿ ಸರಾಸರಿ 243 ಪ್ರಕರಣ ಮಾತ್ರ ಇತ್ತು. ಆದರೆ ಈಗ ಮಾರ್ಚ್ ನಲ್ಲಿ ಸರಾಸರಿ 333 ಕೇಸ್ ಗಳು ಆಗ್ತಿವೆ. ಇದೇ ವಿಚಾರವಾಗಿ ಇಂದು ವಿಶೇಷ ಸಭೆ ನಡೆಸಲಾಗಿದೆ ಎಂದರು. ಹೆಚ್ಚು ಹೆಚ್ಚು ಟೆಸ್ಟಿಂಗ್ ಹಾಗೂ ವ್ಯಾಕ್ಸಿನೇಷನ್ ಮಾಡಲು ಸೂಚಿಸಲಾಗಿದೆ.
ಕೊರೊನಾ ಪಾಸಿಟಿವ್ ಆದ್ರೆ 15 ದಿನ ಮುಂಚಿತವಾಗಿ ಸಂಪರ್ಕ ಇದ್ದವರನ್ನ ಗುರುತಿಸಲಾಗ್ತಿದೆ. ಪ್ರಾಥಮಿಕ , ದ್ವಿತೀಯ ಸಂಪರ್ಕ ಕಂಡು ಹಿಡಿಯಲು ಸೂಚನೆ ನೀಡಲಾಗಿದೆ. ಮಾಲ್, ಸ್ಕೂಲ್ಸ್ , ಕಾಲೇಜು , ಹೋಟೇಲು, ಥಿಯೇಟರ್, ಮಾರುಕಟ್ಟೆ ಮೇಲೆ ನಿಗಾ ಇಡಲಾಗುತ್ತದೆ ಎಂದರು.
ಆಫಿಕ್ರನ್ ತಳಿಯ ವೈರಸ್:
ಆಫ್ರಿಕನ್ ವೈರೆಸ್ ಬಹಳ ವೇಗವಾಗಿ ಹರಡ್ತಿದೆ. ಸದ್ಯ ಶಿವಮೊಗ್ಗದಲ್ಲಿ ಆ ವ್ಯಕ್ತಿ ಇದಾರೆ. ಮಹಾರಾಷ್ಟ್ರ ದಲ್ಲಿ 13 ಸಾವಿರ ಕೇಸ್ ಗಳು ಒಂದೇ ದಿನ ವರದಿಯಾಗಿದ್ದು, ವೇಗವಾಗಿ ಹರಡುತ್ತಿದೆ. ನಗರದಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕು, ಕೊರೊನಾ ಲಕ್ಷಣ ಕಂಡು ಬಂದರೆ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದರು.
ಲೇಟ್ ನೈಟ್ ಪಾರ್ಟಿ:
ತಡರಾತ್ರಿ ಪಾರ್ಟಿ ಗಳನ್ನು ಬ್ಯಾನ್ ಮಾಡುವ ಬಗ್ಗೆ, ಆರೋಗ್ಯ ಇಲಾಖೆ ಈ ಆದೇಶ ಹೊರಡಿಸಿದರೆ, ನಿಯಂತ್ರಣಕ್ಕೆ ಬೇಕಾದ ಕ್ರಮಕೈಗೊಳ್ಳಲಾಗುವುದು ಎಂದರು. ಮದುವೆ, ಹೋಟೆಲ್ ಎಲ್ಲಾ ಕಡೆ ಜನ ಸೇರುವುದು ಬೇಡ. 500 ಜನರಿಗೆ ಮಿತಿಗೊಳಿಸಲು ಆರೋಗ್ಯ ಇಲಾಖೆ ಆದೇಶ ನೀಡಿದೆ. ಮುಂದಿನ ದಿನಗಳಲ್ಲಿ ಲೇಟ್ ನೈಟ್ ಪಾರ್ಟಿಗಳಿಗೆ ಕಡಿವಾಣ ಹಾಕಲು ಚಿಂತನೆ ನಡೆಸಲಾಗಿದೆ ಎಂದರು.
ನಗರದಲ್ಲಿ ಕಳೆದೆರಡು ದಿನಗಳಲ್ಲಿ 480, 470 ಪ್ರಕರಣ ಕಂಡುಬಂದಿದ್ದು,ಇನ್ನೂ ಹೆಚ್ಚಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಈ ಬಗ್ಗೆ ನಗರದ ಜನರು ಎಚ್ಚರಿಕೆಯಲ್ಲಿರಬೇಕು ಎಂದರು.
ಅಧಿಕಾರಿ- ಗುತ್ತಿಗೆದಾರರ ಮಾರಾಮಾರಿ ಪ್ರಕರಣ ಈ ಪ್ರಕರಣ ಗಮನಕ್ಕೆ ಬಂದಿದ್ದು, ಈಗಾಗಲೇ ಕೇಸ್ ಕೂಡಾ ದಾಖಲಾಗಿದೆ. ಏನೇ ಇದ್ದರೂ ಮಾತುಕತೆ ಮೂಲಕ ಸರಿ ಮಾಡಬಹುದು, ಕಚೇರಿಯಲ್ಲಿ ಹೊಡೆದಾಡುವ ಅಗತ್ಯ ಇಲ್ಲ. ಅಧಿಕಾರಿಗೂ ಶೋಕಾಸು ನೋಟೀಸ್ ನೀಡಲಾಗುವುದು ಎಂದರು.
ಪಾಲಿಕೆ ಎಂಜಿನಿಯರ್ ದೇವೇಂದ್ರಪ್ಪ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಬಿಬಿಎಂಪಿ ಫೈಲ್ಸ್ ಅಧಿಕಾರಿಗಳ ಮನೆಯಲ್ಲಿದ್ರೆ ಕೇಸ್ ಹಾಕಲಾಗುವುದು. ಇವರ ಮನೆಯಲ್ಲಿದ್ದಿದ್ದು, ಎಲ್ಲವೂ ಅನಧಿಕೃತ, ಇಲ್ಲೀಗಲ್ ಫೈಲ್ ಗಳು. ಇನ್ನೆಲ್ಲವೂ ಕಡತ ವ್ಯವಹಾರ ಡಿಜಿಟಲ್ ರೂಪದಲ್ಲಿ ನಡೆಸಲಾಗುವುದು. ದೇವೇಂದ್ರಪ್ಪ ಮನೆಯಲ್ಲಿದ್ದ ಫೈಲ್ , ಸೀಲ್ ಎಲ್ಲವೂ ನಕಲಿ. ಇನ್ನು ಮುಂದೆ, ಡಿಜಿ ಲಾಕ್ ನಲ್ಲಿ ಕಡತಗಳು ಸಿಗಲಿದೆ ಎಂದರು.