– ತಹಶೀಲ್ದಾರ್ ಸಹಿ, ಮೊಹರು ನಕಲಿಸಿ ಹಣ ಲಪಟಾಯಿಸಿದ್ರು
ಯಾದಗಿರಿ: ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿದೆ ಅನ್ನೋ ಆರೋಪ ರಾಜ್ಯದಲ್ಲಿ ಎದ್ದಿರುವ ಬೆನ್ನಲ್ಲೇ ಸುರಪುರದಲ್ಲಿ ಕೋವಿಡ್ ನಿರ್ವಹಣೆಗಾಗಿ ಸರ್ಕಾರ ನೀಡಿದ್ದ ಲಕ್ಷ- ಲಕ್ಷ ಹಣವನ್ನೇ ಎಗರಿಸಲಾಗಿದೆ. ಕೋವಿಡ್ ಹಣಕ್ಕೆ ಕನ್ನ ಹಾಕಿರುವ ಖದೀಮರು, ನಕಲಿ ಸಹಿ ಮಾಡಿ ಅರ್ಧ ಕೋಟಿಗಿಂತ ಅಧಿಕ ಹಣ ಲೂಟಿ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಹಶೀಲ್ದಾರ್ ನಿಂಗಣ್ಣ ಬಿರಾದರ ಸಹಿ ಮತ್ತು ಮೊಹರು ನಕಲು ಮಾಡಿ, ಸುರಪುರ ಪಟ್ಟಣದ ಎಕ್ಸಿಸ್ ಬ್ಯಾಂಕ್ ನಲ್ಲಿರುವ ತಹಶೀಲ್ದಾರ್ ಅವರ ಸರ್ಕಾರಿ ಖಾತೆಯಿಂದ 75,59,900 ರೂ. ಹಣ ದೋಚಲಾಗಿದೆ. ಶ್ರೀ ಮಹಾಲಕ್ಷ್ಮಿ ಎಂಟರ್ ಪ್ರೈಸಸ್ ಹೆಸರಿನ ಖಾತೆಗೆ ಚೆಕ್ ಹಣ ವರ್ಗಾವಣೆಗೊಂಡಿದೆ. ಶ್ರೀ ಮಹಾಲಕ್ಷ್ಮಿ ಎಂಟರ್ ಪ್ರೈಸಸ್ ಮಾಲೀಕೆ ಲಕ್ಷ್ಮೀ ಗಂಡ ರಾಜು ಕಟ್ಟಿಮನಿ ಎಂಬವರ ಖಾತೆಗೆ ಸಂಪೂರ್ಣ ಹಣ ವರ್ಗಾವಣೆಗೊಂಡಿದೆ. ಲಕ್ಷ್ಮೀ ಪತಿ ರಾಜು ಕಟ್ಟಿಮನಿ ತಹಶೀಲ್ದಾರ್ ಅವರ ಸಹಿ ಮತ್ತು ಮೊಹರು ನಕಲು ಮಾಡಿ ಹಣವನ್ನು ಲಪಟಾಯಿಸಿದ್ದಾರೆ.
ವಂಚನೆಯಾದ ಬಗ್ಗೆ ತಹಶೀಲ್ದಾರ್ ಅವರು ಸುರಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ನೈಸರ್ಗಿಕ ವಿಕೋಪದಡಿ ಸರ್ಕಾರದಿಂದ ತಹಶೀಲ್ದಾರ್ ಖಾತೆಗೆ ಕೋಟ್ಯಂತರ ರೂ. ಹಣ ಜಮಾ ಆಗಿತ್ತು, ನೈಸರ್ಗಿಕ ವಿಕೋಪ ಹಾಗೂ ಕೋವಿಡ್ ನಿರ್ವಹಣೆಗೆ ತಹಶೀಲ್ದಾರ್ ಖಾತೆಗೆ ಜಿಲ್ಲಾಡಳಿತದಿಂದಲ್ಲೂ ಸಹ ಲಕ್ಷಾಂತರ ರೂಪಾಯಿ ಜಮಾ ಮಾಡಲಾಗಿತ್ತು.
ಕಳೆದ ಹಲವು ದಿನಗಳ ಹಿಂದೆ ತಹಶೀಲ್ದಾರ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟು, ಆಸ್ಪತ್ರೆ ಸೇರಿದ್ದರು. ಈ ವೇಳೆ ಅವರ ಸಹಿ ಮತ್ತು ಮೊಹರು ನಕಲು ಮಾಡಿ ಹಣವನ್ನು ದೋಚಲಾಗಿದೆ.