-ಮುಗಿಬಿದ್ದು ಸನ್ಮಾನ ಮಾಡಿದ ಜನ
ರಾಯಚೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಕೋವಿಡ್ ನಿಯಮಗಳನ್ನ ಸರ್ಕಾರದ ಭಾಗವಾದ ಸಚಿವರೇ ಸಾರಸಗಟಾಗಿ ಉಲ್ಲಂಘಿಸುತ್ತಿದ್ದಾರೆ. ರಾಯಚೂರಿನ ಮಸ್ಕಿಯ ಬುದ್ದಿನ್ನಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಜನರ ನೂಕುಗ್ಗುಲಿನಲ್ಲಿ ಭರ್ಜರಿ ಸನ್ಮಾನ ಮಾಡಿಸಿಕೊಂಡಿದ್ದಾರೆ. ವೇದಿಕೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೆ ಜನ ಸಚಿವರಿಗೆ ಸನ್ಮಾನ ಮಾಡಿದ್ದಾರೆ.
ನಂದವಾಡಗಿ ಏತ ನೀರಾವರಿ ಯೋಜನೆಯ ಹನಿನೀರಾವರಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿದ ಸಚಿವರು ಕೊರೊನಾ ನಿಯಮಗಳನ್ನ ಉಲ್ಲಂಘಿಸಿದ್ದಾರೆ. ವೇದಿಕೆಗೆ ಗುಂಪು ಗುಂಪಾಗಿ ಆಗಮಿಸಿ ಸನ್ಮಾನಿಸಿದ ವಿವಿಧ ಸಂಘಟನೆಯವರು ಯಾವುದೇ ಸಾಮಾಜಿಕ ಅಂತರ ಕಾಪಾಡಲಿಲ್ಲ. ಸಚಿವರ ಜೊತೆ ಸೆಲ್ಫಿಗಾಗಿ ಜನ ಮುಗಿಬಿದ್ದಿದ್ದರು.
ಇನ್ನೂ ಕೆಬಿಜೆಎನ್‍ಎಲ್ ನಿಂದ ಆಯೋಜಿಸಿರುವ ಕಾರ್ಯಕ್ರಮ ಪಕ್ಷದ ಕಾರ್ಯಕ್ರಮವಾಗಿ ಬದಲಾಗಿತ್ತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲರೇ ರಾರಾಜಿಸುತ್ತಿದ್ದರು. ವೇದಿಕೆಯ ಮೇಲಿನ ಬ್ಯಾನರಿನಲ್ಲಿಯೂ ಪ್ರತಾಪಗೌಡ ಎದ್ದು ಕಾಣುವಂತೆ ಹಾಕಿದ್ದಾರೆ. ಕಾರ್ಯಕ್ರಮದಲ್ಲಿ ಬಹುತೇಕ ಬಿಜೆಪಿ ಮುಖಂಡರೆ ಭಾಗವಹಿಸಿದ್ದು ಪ್ರೊಟೊಕಾಲ್ ಉಲ್ಲಂಘನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಜುಗೌಡ, ಶಿವರಾಜ ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.