ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳ ಸಂಪರ್ಕ ಪತ್ತೆ ಮಾಡುವ ವಿಚಾರವಾಗಿ ಇಂದು ಹಲಸೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಸಂಪರ್ಕ ಪತ್ತೆ ಕಾರ್ಯವನ್ನು ಇನ್ನಷ್ಟು ಸದೃಢಗೊಳಿಸಿ ಸಮರ್ಪಕವಾಗಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.
ನಗರದಲ್ಲಿ ಕೋವಿಡ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತಿದ್ದು, ಇರುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ 60,000 ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದ್ದು, ಅದನ್ನು ಮತ್ತಷ್ಟು ಹೆಚ್ಚಳ ಮಾಡಲು ಕ್ರಮವಹಸಿಲಾಗುವುದು. ರೋಗಲಕ್ಷಣಗಳಿರುವ, ಹೊರ ರಾಜ್ಯ ಅಥವಾ ಬೇರೆ ನಗರಗಳಿಂದ ಬರುವವರು ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಾಗೂ ಸೋಂಕು ಹೆಚ್ಚಳವಾಗುತ್ತಿರುವ ಪ್ರದೇಶದಲ್ಲಿ ಹೆಚ್ಚು ಪರೀಕ್ಷೆಗಳನ್ನು ಮಾಡಬೇಕು ಎಂದು ಹೇಳಿದರು.
ನಾಗರಿಕರು ಸ್ವಯಂಪ್ರೇರಿತರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೋವಿಡ್ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಆಂತರ ಕಾಯ್ದುಕೊಳ್ಳುವುದು, ಸಭೆ/ಸಮಾರಂಭ ಹಾಗೂ ಜಾತ್ರೆಗಳಲ್ಲಿ ಸಾಧ್ಯವಾದಷ್ಟು ಭಾಗಿಯಾಗದೇ ಇದ್ದಾಗ ಕೋವಿಡ್ ನಿಯಂತ್ರಣ ಸಾಧ್ಯ ಎಂದರು.
ನಗರದಲ್ಲಿ ಕೋವಿಡ್ ಪ್ರಕರಣಗಳು ಕ್ರಮೇಣ ಹೆಚ್ಚಾತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಅವಶ್ಯಕ್ಕನುಗುಣವಾಗಿ ಸರ್ಕಾರದ ನಿರ್ದೇಶನದಂತೆ ಹಾಸಿಗೆಗಳನ್ನು ಹಂತ ಹಂತವಾಗಿ ಹೆಚ್ಚಿಸಲಾಗುವುದು ಎಂದರು.
ನಗರದಲ್ಲಿ ಪ್ರತಿನಿತ್ಯ ಸುಮಾರು 35,000 ಮಂದಿ ಲಸಿಕೆ ಪಡೆಯುತ್ತಿದ್ದಾರೆ. ಅದನ್ನು ಮತ್ತಷ್ಟು ಹೆಚ್ಚಳ ಮಾಡಲು ಕ್ರಮವಹಿಸಲಾಗುತ್ತಿದೆ. ಈ ಪೈಕಿ ಅಪಾರ್ಟ್ ಮೆಂಟ್ ಗಳಲ್ಲಿರುವ, ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡುವ ಎಲ್ಲರೂ ಲಸಿಕೆ ತೆಗೆದುಕೊಳ್ಳಬೇಕು. ಅಪಾರ್ಟ್ ಮೆಂಟ್ಸ್ ಗಳಲ್ಲಿ ಎಲ್ಲರೂ ಲಸಿಕೆ ತೆಗದುಕೊಳ್ಳುವ ಸಂಬಂಧ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಸಭೆ ನಡೆಸಿ ಲಸಿಕೆ ಪಡೆಯುವ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಪೂರ್ವ ವಲಯ ವಾರ್ ರೂಂಗೆ ಭೇಟಿ: ಪೂರ್ವ ವಲಯ ವ್ಯಾಪ್ತಿಗೆ ಸಂಬಂಧಿಸಿದಂತೆ ವಾರ್ ರೂಂಗೆ ಭೇಟಿ ನೀಡಿ ಸಂಪರ್ಕ ಪತ್ತೆ, ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿಕೊಳ್ಳುತ್ತಿರುವ ಬಗ್ಗೆ ಮುಖ್ಯ ಆಯುಕ್ತರು ಪರಿಶೀಲನೆ ನಡೆಸಿದರು.
ಐಸಿಎಂಆರ್ ಪೋರ್ಟಲ್‍ನಿಂದ ವಲಯವಾರು ಇಂಡೆಕ್ಸ್ ತಂತ್ರಾಂಶಕ್ಕೆ ಕೋವಿಡ್ ಸೋಂಕು ಪ್ರಕರಣಗಳ ಮಾಹಿತಿ ಲಭ್ಯವಾಗಲಿದೆ. ಆ ಮಾಹಿತಿಯ ಅನುಸಾರ ಸೋಂಕಿತ ವ್ಯಕ್ತಿಗಳಿಗೆ ಕರೆಮಾಡಿ ಕೋಮ್ ಆರ್ಬಿಡಿಟ್ ಸೋಂಕಿತರನ್ನು ಆಸ್ಪತ್ರೆಗಳಲ್ಲಿ ದಾಖಲಿಸುವುದು ಹಾಗೂ ಎ-ಸಿಮ್ಟಮ್ಯಾಟಿಕ್ ಇರುವವರು ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ವಾರ್ ರೂಂ ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸೋಂಕಿತ ವ್ಯಕ್ತಿಗಳಿಗೆ ಪ್ರತಿನಿತ್ಯ ಕರೆ ಮಾಡಿ ಆರೋಗ್ಯ ವಿಚಾರಿಸಿಕೊಳ್ಳಲಿದ್ದಾರೆ ಎಂದು ಆರೋಗ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಎರಡನೇ ಡೋಸ್ ಲಸಿಕೆ ಪಡೆದ ಮುಖ್ಯ ಆಯುಕ್ತರು: ಬೌರಿಂಗ್ ಆಸ್ಪತ್ರೆಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ರವರು ಎರಡನೇ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡರು.
ತಪಾಸಣೆ ವೇಳೆ ವಿಶೇಷ ಆಯುಕ್ತರು(ಆರೋಗ್ಯ) ರಾಜೇಂದ್ರ ಚೋಳನ್, ಜಂಟಿ ಆಯುಕ್ತರು ಪಲ್ಲವಿ, ಮುಖ್ಯ ಆರೋಗ್ಯ ಅಧಿಕಾರಿ ಡಾ. ವಿಜೇಂದ್ರ, ವಲಯ ಆರೋಗ್ಯಾಧಿಕಾರಿ ಡಾ. ಸಿದ್ದಪ್ಪಾಜಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.