– ಸಾಮಾಜಿಕ ಅಂತರ ಕಾಪಾಡದೇ ಮಾರಾಟ
– ಅಂಗಡಿಯನ್ನು ಮುಚ್ಚಿಸಿದ ಅಧಿಕಾರಿಗಳು
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೊರೊನಾ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿರುವ ಜಿಲ್ಲಾಡಳಿತ ಸುರಕ್ಷಾ ಕೋವಿಡ್ ರಕ್ಷಣಾ ಪಡೆಗಳನ್ನು ರಚಿಸಿದೆ. ಈ ಪಡೆಗಳನ್ನು ಕೋವಿಡ್ ತಡೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ವಿಶೇಷವಾಗಿ ಸಜ್ಜುಗೊಳಿಸಲಾಗಿದೆ.
Advertisement
ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಎರಡನೇ ಅಲೆ ಭರ್ಜರಿಯಾಗಿಯೇ ಅಪ್ಪಳಿಸುತ್ತಿದೆ. ಕಳೆದ ಬಾರಿಗೆ ಹೋಲಿಸಿದರೆ ಕೊರೊನಾ ಬಹಳ ವೇಗವಾಗಿ ಹರಡುತ್ತಿವೆ. ಈಗಾಗಲೇ ಕಳೆದ 2 ವಾರಗಳಿಂದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದ್ದರೂ ಜನರಲ್ಲಿ ನಿರ್ಲಕ್ಷ್ಯ ಹಾಗು ಉದಾಸೀನ ಭಾವನೆ ಕಾಣುತ್ತಿದೆ. ಹಾಗಾಗಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸುರಕ್ಷಾ ಕೋವಿಡ್ ರಕ್ಷಣಾ ಪಡೆಗಳನ್ನು ರಚಿಸಲಾಗಿದೆ.
Advertisement
Advertisement
ಕೋವಿಡ್ ಶಿಷ್ಟಾಚಾರ ಉಲ್ಲಂಘಿಸುವವರ ವಿರುದ್ದ ದಂಡ ವಿಧಿಸುವಿಕೆ, ಮಾಸ್ಕ್ ಧರಿಸದೇ ಓಡಾಟ ನಡೆಸುವವರಿಗೆ ದಂಡ ಹಾಕುವುದು, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ವ್ಯಾಪಾರ ವಹಿವಾಟು ನಡೆಸುವ ಅಂಗಡಿಮುಂಗಟ್ಟುಗಳನ್ನು ಲೈಸೆನ್ಸ್ ರದ್ದುಗೊಳಿಸುವುದು, ಸಭೆ ಸಮಾರಂಭಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಜನ ಸೇರಿದ್ದರೆ ಆಯೋಜಕರ ಮೇಲೆ ಎಫ್.ಐ.ಆರ್. ದಾಖಲಿಸುವುದು. ಸಾರ್ವಜನಿಕರಲ್ಲಿ ಕೋವಿಡ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳನ್ನು ಈ ಪಡೆಗಳು ಮಾಡಲಿವೆ.
Advertisement
ಜಿಲ್ಲೆಯಾದ್ಯಂತ 13 ಸುರಕ್ಷಾ ಕೋವಿಡ್ ರಕ್ಷಣಾ ಪಡೆಗಳನ್ನು ರಚಿಸಲಾಗಿದ್ದು, ಒಂದೊಂದು ಈ ಪಡೆಯಲ್ಲಿ ಸ್ಥಳೀಯವಾಗಿ ವಿಪತ್ತು ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳು ಈಗಾಗಲೇ ರಚಿಸಿರುವ ತರಬೇತಿ ಪಡೆದ ಕ್ಷಿಪ್ರ ಕಾರ್ಯಾಚರಣೆ ತಂಡದ ಪಡೆಯ ಮೂವರು ಸದಸ್ಯರು, ಒಬ್ಬ ನಗರಸಭೆ ಅಥವಾ ಪುರಸಭೆ ಅಧಿಕಾರಿ ಮತ್ತು ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ 5 ಮಂದಿ ಇರುತ್ತಾರೆ. ಈ ಪಡೆಗಳು ಜನನಿಬಿಡ ಪ್ರದೇಶ, ಹೋಟೆಲ್, ಅಂಗಡಿ ಮುಂಗಟ್ಟು, ಕಲ್ಯಾಣ ಮಂಟಪಗಳು, ಬಸ್ ನಿಲ್ದಾಣ ಮೊದಲಾದ ಕಡೆ ಕಾರ್ಯಚಾರಣೆ ನಡೆಸಲಿವೆ.
ಚಾಮರಾಜನಗರದಲ್ಲಿಂದು ಸುರಕ್ಷಾ ಕೋವಿಡ್ ರಕ್ಷಣಾ ಪಡೆಯ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸ್ವತಃ ಕೋವಿಡ್ ಸುರಕ್ಷಾ ಪಡೆಯೊಂದಿಗೆ ನಗರದ ವಿವಿಧೆಡೆ ಭೇಟಿ ನೀಡಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಸೂಚಿಸಿದರು. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಅಂಗಡಿ ಮುಚ್ಚಲು ಆದೇಶಿಸಿದರು. ಕೋವಿಡ್ ಶಿಷ್ಠಾಚಾರ ಉಲ್ಲಂಘಿಸಿದ ಕೆಲವು ಅಂಗಡಿಗಳನ್ನು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮುಚ್ಚಿಸುವ ಮೂಲಕ ಖಡಕ್ ಎಚ್ಚರಿಕೆ ನೀಡಲಾಯಿತು.
ಸಾರ್ವಜನಿಕರ ಸಹಕಾರ ಇಲ್ಲದಿದ್ದರೆ ಕೊರೊನಾ ಹರಡುವುದನ್ನು ತಡೆಗಟ್ಟುವುದು ಕಷ್ಟವಾಗಲಿದ್ದು, ಜನರು ಅರ್ಥ ಮಾಡಿಕೊಂಡು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು, ಇಲ್ಲದಿದ್ದರೆ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಎಫ್.ಐ.ಆರ್ ದಾಖಲಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ. ಸುರಕ್ಷಾ ಪಡೆಗಳ ಕಾರ್ಯಾಚರಣೆಯಿಂದ ಸಾರ್ವಜನಿಕರು ಇನ್ನಾದರು ಎಚ್ಚೆತ್ತುಕೊಳ್ತಾರಾ. ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.