ಮಡಿಕೇರಿ: ಕೋವಿಡ್ ನಡುವೆ ಕೊಡಗು ಜಿಲ್ಲೆಯಲ್ಲಿ ಇದೀಗ ಮತ್ತೆ ಪ್ರವಾಹದ ಭೀತಿ ಶುರುವಾಗಿದೆ.
ಕೊಡಗು ಜಿಲ್ಲೆಯ ಹತ್ತಾರು ಹಳ್ಳಿಗಳಲ್ಲಿ ಕಳೆದ ಮೂರು ವರ್ಷಗಳಿಂದ ಪ್ರವಾಹ ಹಾಗೂ ಭೂ ಕುಸಿತದ ಭೀತಿ ಇದೆ. ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಈ ಬಾರಿಯೂ ಪ್ರವಾಹ ಉದ್ಭವಿಸುವುದಿಲ್ಲ ಎನ್ನುವ ಯಾವ ಖಾತರಿಯೂ ಇಲ್ಲ. ಇದರ ನಡುವೆ ಕೋವಿಡ್ ಸೋಂಕಿನ ಭೀತಿ ತೀವ್ರವಾಗಿ ಕಾಡುತ್ತಿದೆ. ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಇಲ್ಲಿನ ಜನರಿಗೆ ಆತಂಕ ಶುರುವಾಗಿದೆ.
ಮಳೆ ಹೆಚ್ಚಾಯಿತೆಂದರೆ ಕೊಡಗಿನ ಭಾಗಮಂಡಲದಿಂದ ಆರಂಭವಾಗಿ ಇತ್ತ ಕಣಿವೆ ಗ್ರಾಮದವರೆಗೂ ಕಾವೇರಿ ನದಿ ದಂಡೆಯಿಂದ 80ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹ ಪೀಡಿತವಾಗುತ್ತವೆ. ವಿರಾಜಪೇಟೆ ತಾಲೂಕಿನ ಕರಡಿಗೋಡು, ಗುಹ್ಯ, ಕಕ್ಕಟ್ಟು ಕಾಡು ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ, ಕುಂಬಾರ ಗುಂಡಿ ಬರಡಿ ಸೇರಿದಂತೆ ಹಲವು ಗ್ರಾಮಗಳು ತೀವ್ರ ಸಂಕಷ್ಟಕ್ಕೆ ಸಿಲುಕುತ್ತವೆ. ಇದನ್ನು ಓದಿ: ಹಿಂದೂ ಧಾರ್ಮಿಕ ದತ್ತಿಯಿಂದ ಮಸೀದಿ, ಮದರಸಾಗಳಿಗೆ ತಸ್ತಿಕ್ ಭತ್ತೆ ನೀಡಲು ನಿರ್ಧಾರ- ವಿಹೆಚ್‍ಪಿ ವಿರೋಧ
ಈ ಗ್ರಾಮಗಳಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಸಾಕಷ್ಟು ಕುಟುಂಬಗಳಿಗೆ ಇಂದಿಗೂ ಬದಲಿ ವಸತಿ ವ್ಯವಸ್ಥೆ ಆಗಿಲ್ಲ. ಹೀಗಾಗಿ ನದಿ ದಂಡೆಯಲ್ಲಿಯೇ ಮತ್ತೆ ಶೆಡ್‍ಗಳನ್ನು ನಿರ್ಮಿಸಿಕೊಂಡು ಬದುಕು ನಡೆಸುತ್ತಿದ್ದಾರೆ. ಆದರೆ ಈ ಬಾರಿಯೂ ಪ್ರವಾಹ ಎದುರಾಗಿದ್ದೇ ಆದಲ್ಲಿ ಇಂತಹ ಗ್ರಾಮಗಳ ಸಾವಿರಾರು ಕುಟುಂಬಗಳನ್ನು ಕಳೆದ ಮೂರು ವರ್ಷದಂತೆ ಈ ಬಾರಿಯೂ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಬೇಕಾಗಿರುವುದು ಅಗತ್ಯ. ಹೀಗಾಗಿಯೇ ಜಿಲ್ಲಾಧಿಕಾರಿಯವರು ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಬಂದಿದ್ದಾರೆ.
ಜಿಲ್ಲಾಡಳಿತ ಈ ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಿದರೆ ಕೋವಿಡ್ ಸೋಂಕು ತೀವ್ರವಾಗಿ ಹರಡುವುದು ಖಚಿತ. ಈಗಾಗಲೇ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು, ಗುಹ್ಯ, ಕಕ್ಕಟ್ಟು ಕಾಡು ಸೇರಿದಂತೆ ಹಲವು ಗ್ರಾಮಗಳಲ್ಲಿ 200ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳಿವೆ. ಕುಂಬಾರಗುಂಡಿ, ನೆಲ್ಯಹುದಿಕೇರಿ ಸೇರಿದಂತೆ ಹಲವು ಗ್ರಾಮಗಳಲ್ಲಿಯೂ ಇಂದಿಗೂ ಸಾಕಷ್ಟು ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದು, ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸ್ಥಿತಿ ಹೀಗಿರುವಾಗ ಪ್ರವಾಹ ಎದುರಾಗುತ್ತಿದ್ದಂತೆ ಕಾಳಜಿ ಕೇಂದ್ರಗಳಿಗೆ ಜನರನ್ನು ಸ್ಥಳಾಂತರಿಸಿದ್ದೆ ಆದಲ್ಲಿ ಕೋವಿಡ್ ಸೋಂಕು ಕಾಳಜಿ ಕೇಂದ್ರಗಳಿಗೆ ಬರುವ ಎಲ್ಲರಿಗೂ ಹರಡುವುದು ಸತ್ಯ. ಇದನ್ನು ಓದಿ: ತರಕಾರಿ ವಾಹನದಲ್ಲಿ ಮದ್ಯ ಸಾಗಾಟ – 500 ಲೀಟರ್ ಎಣ್ಣೆ ವಶಕ್ಕೆ ಪಡೆದ ಪೊಲೀಸರು
ಈ ಪ್ರವಾಹ ಎದುರಾಗುವ ಎಲ್ಲಾ ಗ್ರಾಮಗಳ್ಲಲಿರುವ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಕೊಡುವಂತೆ ಜನ ಆಗ್ರಹಿಸುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಾದರೆ ಮಳೆಯ ಪ್ರಮಾಣ ಜಾಸ್ತಿಯಾಗುತ್ತಿದ್ದಂತೆ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದೆವು. ಆದರೆ ಈ ಬಾರಿ ಕೋವಿಡ್ ಸೋಂಕು ಇರುವುದರಿಂದ ಸಂಬಂಧಿಕ ಮನೆಗಳಿಗೂ ಹೋಗುವುದಕ್ಕೆ ಹಿಂದೆ ಮುಂದೆ ನೋಡಬೇಕಾಗಿದೆ. ಹೀಗಾಗಿ ತಕ್ಷಣವೇ ಜನರಿಗೆ ವ್ಯಾಕ್ಸಿನ್ ನೀಡಬೇಕು ಎಂದು ಜನರು ಆಗ್ರಹಿಸಿದ್ದಾರೆ.