ಹಾವೇರಿ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯ ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ಹಾಗೂ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆದರೆ ನಾಗಲಾಪೂರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಗ್ರಾಮಸ್ಥರು ತಪಾಸಣೆಗೆ ನಿರಾಕರಿಸುತ್ತಿರುವುವುದು ಕಂಡುಬರುತ್ತಿದೆ. ಇಂತಹ ಗ್ರಾಮಗಳನ್ನು ಸಂಪೂರ್ಣ ಲಾಕ್‍ಡೌನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ್ ಎಚ್ಚರಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಡಿಯೋ ಸಂವಾದ ನಡೆಸಿದ ಅವರು, ಕೋವಿಡ್ ತಪಾಸಣೆಗೆ ಸಹಕರಿಸದೇ, ಆರೋಗ್ಯ ಸಿಬ್ಬಂದಿ ತಪಾಸಣೆಗೆ ತೆರಳಿದರೆ ಮನೆಯೊಳಗೆ ಸೇರಿಕೊಂಡು ಪ್ರತಿಭಟಿಸುತ್ತಿರುವುದು ಕಂಡುಬಂದಿದೆ. ಬ್ಯಾಡಗಿ ತಾಲೂಕಿನ ನಾಗಲಾಪೂರ ಗ್ರಾಮದಲ್ಲಿ ಇಂತಹ ಘಟನೆ ನಡೆದಿದ್ದು, ಇಡಿ ಗ್ರಾಮವನ್ನು ಲಾಕ್‍ಡೌನ್ ಮಾಡುವಂತೆ ಘೋಷಿಸಲಾಗಿದೆ. ಗ್ರಾಮದಿಂದ ಹೊರಗೆ ಹಾಗೂ ಗ್ರಾಮದ ಒಳಗೆ ಓಡಾಟವನ್ನು ಪೂರ್ಣ ನಿರ್ಬಂಧಿಸಲಾಗಿದೆ. ಇದೇ ಮಾದರಿಯಲ್ಲಿ ಇತರ ಗ್ರಾಮಗಳಲ್ಲಿ ಮುಂದುವರೆದರೆ ಇಡಿ ಗ್ರಾಮವನ್ನು ಲಾಕ್‍ಡೌನ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಸರ್ವೇ, ಪರೀಕ್ಷೆ ಹಾಗೂ ಪಾಸಿಟಿವ್ ಬಂದರೆ ಕೋವಿಡ್ ಆಸ್ಪತ್ರೆಗೆ ಸೇರಿಸುವುದು ಸೇರಿದಂತೆ ಗ್ರಾಮೀಣ ಟಾಸ್ಕ್ ಫೋರ್ಸ್ ಕೋವಿಡ್ ನಿಯಂತ್ರಣದ ಪೂರ್ಣ ಜವಾಬ್ದಾರಿ ನೀಡಲಾಗಿದೆ. ಆದರೆ ನಾಗಲಾಪೂರದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿರುವುದಿಲ್ಲ. ಯಾವುದೇ ಗ್ರಾಮಗಳಲ್ಲಿ ಈ ರೀತಿಯ ಬೆಳವಣಿಗೆ ನಡೆದರೆ ಆಯಾ ಗ್ರಾಮದ ಗ್ರಾಮೀಣ ಟಾಸ್ಕ್ ಫೋರ್ಸ್ ಕೋವಿಡ್ ಪೆಂಡ್‍ಮಿಕ್ ಕಾಯ್ದೆ ಅನುಸಾರ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.