ದಾವಣಗೆರೆ: ಹಲವರು ಕೋವಿಡ್ ಕೇರ್ ಸೆಂಟರ್ ಗೆ ತೆರಳಲು ಹಿಂದೇಟು ಹಾಕುತ್ತಾರೆ, ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿಯುತ್ತಾರೆ. ಆದರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಿಂದ ತೆರಳಲು ಬಾಲಕಿ ಹಿಂದೇಟು ಹಾಕುತ್ತಿದ್ದು, ಶಾಸಕ ರೇಣುಕಾಚಾರ್ಯರನ್ನು ಬಿಗಿದಪ್ಪಿ ಕಣ್ಣೀರಿಟ್ಟಿದ್ದಾರೆ.
ಕೋವಿಡ್ ಶುರುವಾದಗಿನಿಂದ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುತ್ತಿರುವ ರೇಣುಕಾಚಾರ್ಯ ಅವರು, ಕೋವಿಡ್ ಕೇರ್ ಸೆಂಟರ್‍ನ್ನು ಮನೆಯಂತೆ ಭಾವಿಸಿ, ಸೋಂಕಿತರ ಜೊತೆ ಕಾಲ ಕಳೆಯುತ್ತಿದ್ದಾರೆ. ಮಾತ್ರವಲ್ಲ ಗುಣಮಟ್ಟದ ಊಟ, ಮನರಂಜನೆ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಿ. ಜನರ ಆರೈಕೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಕೊರೊನಾದಿಂದ ಗುಣಮುಖವಾದ ಬಾಲಕಿಯೊಬ್ಬಳು ರೇಣುಕಾಚಾರ್ಯ ರನ್ನು ಬಿಗಿದಪ್ಪಿ ಕಣ್ಣೀರಿಟ್ಟು, ಕೋವಿಡ್ ಕೇರ್ ಸೆಂಟರ್ ನಿಂದ ಹೊರ ಹೋಗಿದ್ದಾಳೆ.
ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಕೊರೊನಾದಿಂದ ಮುಖರಾದವರಿಗೆ ಹೂ ಮಳೆ ಸುರಿಸಿ ಬೀಳ್ಕೊಡಲಾಗುತ್ತಿದೆ. ಅದೇ ರೀತಿ ಶಾಸಕ ರೇಣುಕಾಚಾರ್ಯ ಕಾರ್ಯಕ್ರಮ ಏರ್ಪಡಿಸಿದ್ದರು. ಇಂದು ಕೊರೊನಾದಿಂದ ಗುಣಮುಖರಾಗಿ ಕೇರ್ ಸೆಂಟರ್ ನಿಂದ ಹೊರ ಹೋಗುತ್ತಿದ್ದ 32 ಜನರನ್ನು ಬೀಳ್ಕೊಡುವ ಸಂದರ್ಭದಲ್ಲಿ ಕೋವಿಡ್ ನಿಂದ ಗುಣಮುಖವಾದ ಬಾಲಕಿ ಶಾಸಕರನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾಳೆ. ಅಲ್ಲದೆ ಬಾಲಕಿ ಕೇರ್ ಸೆಂಟರ್ ಬಿಟ್ಟು ಹೋಗಲು ಹಿಂದೇಟು ಹಾಕಿದ್ದಾಳೆ. ಬಳಿಕ ರೇಣುಕಾಚಾರ್ಯ ಅವರು ಬಾಲಕಿಗೆ ಸಮಾಧಾನ ಮಾಡಿ ಕಳುಹಿಸಿದ್ದಾರೆ. ಹಲವರು ಶಾಸಕರ ಕಾಲಿಗೆ ಬಿದ್ದು, ಅಭಿಮಾನ ಮೆರೆದಿದ್ದಾರೆ.