ಮಂಡ್ಯ: ಕೊರೊನಾ ಸೋಂಕು ತಗುಲಿ ಇಡೀ ಕುಟುಂಬ ಕೋವಿಡ್ ಕೇರ್ ಸೆಂಟರ್ ನಲ್ಲಿ ಇದ್ದರೆ, ಇತ್ತ ಶಾರ್ಟ್ ಸಕ್ರ್ಯೂಟ್‍ನಿಂದ ಕೊರೊನಾ ಸೋಂಕಿತ ಕುಟುಂಬದವರ ಮನೆಗೆ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಇಡೀ ಮನೆ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಜರುಗಿದೆ.
ಲಕ್ಷ್ಮೀಸಾಗರ ಗ್ರಾಮದ ಪ್ರಕಾಶ್ ಅವರ ಮನೆ ಇಂದು ಶಾರ್ಟ್ ಸಕ್ರ್ಯೂಟ್‍ಗೆ ಭಸ್ಮವಾಗಿದೆ. ಪ್ರಕಾಶ್ ಮತ್ತು ಕುಟುಂಬದರಿಗೆ ಕೊರೊನಾ ಸೋಂಕು ತಗುಲಿದ ಕಾರಣ ಇಡೀ ಕುಟುಂಬ ಕೋವಿಡ್ ಕೇರ್ ಸೆಂಟರ್‍ನಲ್ಲಿ ಇತ್ತು. ಹೀಗಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇದನ್ನೂ ಓದಿ: ಕೊರೊನಾ ಪಾಸಿಟಿವ್ ರೇಟ್ ಕುಗ್ಗಿಸಲು ಜಿಲ್ಲಾಡಳಿತ ಪ್ಲ್ಯಾನ್- ಹಳ್ಳಿ, ಹಳ್ಳಿಗೆ ಲಸಿಕೆ ಅಭಿಯಾನ
ಇಂದು ಸಂಜೆಯ ವೇಳೆ ಶಾರ್ಟ್ ಸಕ್ರ್ಯೂಟ್ ಆಗಿದ್ದು, ಮನೆಯಲ್ಲಿ ಯಾರು ಇಲ್ಲದ ಕಾರಣ ಗೊತ್ತಾಗಿಲ್ಲ, ನಂತರ ಶಾರ್ಟ್ ಸಕ್ರ್ಯೂಟ್‍ನ ಕಿಡಿ ಬೆಂಕಿಯಾಗಿ ಇಡೀ ಮನೆಯನ್ನು ವ್ಯಾಪಿಸಿದೆ. ಮನೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ಬಿದ್ದ ಕಾರಣ ಪಕ್ಕದ ಮನೆಗೂ ಬೆಂಕಿ ವ್ಯಾಪಿಸಿತು. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರ ಸಹಾಯದಿಂದ ಬೆಂಕಿ ನಂದಿಸಿದ್ದಾರೆ. ಈ ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.