ಮಡಿಕೇರಿ: ಕೊಡಗಿನಲ್ಲಿ ಕೋವಿಡ್ ಸೋಂಕು ಮಿತಿಮೀರಿ ಹರಡುತಿದ್ದು, ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆಯೂ ಎಲ್ಲೆ ಮೀರಿದೆ. ಹೀಗಾಗಿಯೇ ಕೊಡಗಿನಲ್ಲಿ ಕೋವಿಡ್ ರೋಗಿಗಳಿಗೆ ಬೆಡ್ ಗಳ ಸಮಸ್ಯೆ ತಲೆದೋರಿತ್ತು ಎನ್ನಲಾಗಿತ್ತು. ಶುಕ್ರವಾರ ತಡರಾತ್ರಿ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಒಂದು ಬೆಡ್‍ಗೆ ನಾಲ್ಕು ಜನರನ್ನು ಹಾಕಿದ ವೀಡಿಯೋ ಸಖತ್ ವೈರಲ್ ಆಗಿತ್ತು. ಇದಕ್ಕೆ ಕಾರಣ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಎಂಬುದು ಇದೀಗ ತಿಳಿದಿದೆ.
ಒಂದು ಬೆಡ್‍ನಲ್ಲಿ ನಾಲ್ಕು ಸೋಂಕಿತರನ್ನು ಹಾಕಲಾಗಿದೆ ಎಂದು ಸ್ಥಳದಲ್ಲಿದ್ದ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲಿಂದಲೇ ವಿಡಿಯೋ ಮಾಡಿ ಹರಿಬಿಟ್ಟಿದ್ದ ಸೋಂಕಿತರು, ಜಿಲ್ಲಾಡಳಿತ, ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಮಸ್ಯೆಗೆ ಕಾರಣ ಇದೀಗ ತಿಳಿದಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಈ ದುಸ್ಥಿತಿ ಎದುರಾಗಿದೆ ಎಂಬುದು ಸ್ಪಷ್ಟವಾಗಿದೆ.
ಕೋವಿಡ್ ಆಸ್ಪತ್ರೆಯ ಕೊಠಡಿಯಲ್ಲಿ ಒಂದೊಂದು ಬೆಡ್ ನಲ್ಲಿ ನಾಲ್ಕೈದು ಜನರಿದಿದ್ದು, ಸೋಂಕಿತರು ಗಲಾಟೆ ಮಾಡಿದ್ದ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಕೋವಿಡ್ ಆಸ್ಪತ್ರೆಯ ಮೆಡಿಕಲ್ ಸೂಪರಿಟಿಂಡೆಂಟ್ ಲೋಕೇಶ್, ಪ್ರಕರಣಗಳು ಜಾಸ್ತಿ ಬರುತ್ತಿರುವುದರಿಂದ ಸಿಟಿ ಸ್ಕ್ಯಾನಿಂಗ್, ಎಕ್ಸ್ ರೇ ಸೇರಿದಂತೆ ಇತರೆ ತಪಾಸಣೆಗಳು ತಡವಾಗುತ್ತಿರುವುದರಿಂದ ಸೋಂಕಿತರಿಗೆ ಸಮಸ್ಯೆ ಎನ್ನಿಸುತ್ತಿದೆ. ಹೀಗಾಗಿ ಖಾಸಗಿ ಸ್ಕ್ಯಾನಿಂಗ್ ಸೆಂಟರ್ ಗಳನ್ನು ಸ್ಕ್ಯಾನಿಂಗ್ ಗೆ ಬಳಕೆ ಮಾಡಿಕೊಳ್ಳಲಾಗುವುದು. ಅಲ್ಲದೆ ವೈದ್ಯರ ಕೊರತೆ ಇದ್ದು, ಸದ್ಯ ಎಂಬಿಬಿಎಸ್ ಪರೀಕ್ಷೆ ಪಡೆದಿರುವ ವಿದ್ಯಾರ್ಥಿಗಳನ್ನು ಕರ್ತವ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಎಚ್‍ಓ ಮೋಹನ್ ಕುಮಾರ್, ಜಿಲ್ಲೆಯಲ್ಲಿ ನಿಜವಾಗಿಯೂ ಬೆಡ್ ಗಳ ಸಮಸ್ಯೆ ಇಲ್ಲ. ಪಾಸಿಟಿವ್ ಬಂದಿರುವ ವ್ಯಕ್ತಿಗಳಿಗೆ ಹಲವು ತಪಾಸಣೆಗಳನ್ನು ಮಾಡಬೇಕಾಗಿರುತ್ತದೆ. ಅಂತಹವರನ್ನು ಹೊರಗೆ ಓಡಾಡಲು ಬಿಟ್ಟರೆ ಬೇರೆಯವರಿಗೆ ಸೋಂಕು ಹರಡಬಹುದೆಂದು ಒಂದು ಕೊಠಡಿಯಲ್ಲಿ ಕೂರಿಸಿದ್ದೆವು. ಅವರಿಗೆ ಇನ್ನೂ ಪ್ರತ್ಯೇಕ ಬೆಡ್ ಗಳನ್ನು ಕೊಟ್ಟಿರಲಿಲ್ಲ. ಎಲ್ಲ ತಪಾಸಣೆಗಳು ಮುಗಿದ ಬಳಿಕ ಯಾರಿಗೆ ಆರೋಗ್ಯದ ಗಂಭೀರ ಸಮಸ್ಯೆ ಇರುತ್ತದೆಯೋ ಅವರನ್ನು ಮಾತ್ರವೇ ಆಸ್ಪತ್ರೆಯಲ್ಲೇ ಪ್ರತ್ಯೇಕ ಕೊಠಡಿಗಳಲ್ಲಿ ಬೆಡ್ ನೀಡಿ ಉಳಿಸಿಕೊಳ್ಳಲಾಗುತ್ತದೆ. ಉಳಿದವರನ್ನು ಹೋಮ್ ಐಸೋಲೇಷನ್ ಮಾಡಲಾಗುತ್ತದೆ. ಶುಕ್ರವಾರ ರಾತ್ರಿಯೂ ಇದೇ ಸಮಸ್ಯೆ ಆಗಿತ್ತು. ಆದರೆ ಇದನ್ನೇ ಒಂದೊಂದೇ ಬೆಡ್ ನಲ್ಲಿ ನಾಲ್ಕೈದು ಜನರನ್ನು ಇರಿಸಲಾಗಿದೆ ಎಂದು ವೀಡಿಯೋ ಮಾಡಿದ್ದರು. ಇದು ಸುಳ್ಳು ಎಂದು ತಿಳಿಸಿದರು.
ಹೆಚ್ಚಿನ ಕೋವಿಡ್ ತಪಾಸಣೆಗಳನ್ನು ಮಾಡುತ್ತಿರುವುದರಿಂದ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಬೆಡ್ ಗಳ ಕೊರತೆಯಾಗದಂತೆ, ಸೋಮವಾರಪೇಟೆ, ವಿರಾಜಪೇಟೆ ಪಾಲಿಬೆಟ್ಟಗಳಲ್ಲಿ ಆಕ್ಸಿಜನ್ ಬೆಡ್ ಗಳನ್ನು ರೆಡಿ ಮಾಡಲಾಗುತ್ತಿದೆ. ಆದರೆ ಇದರ ನಡುವೆ ಸೋಮವಾರಪೇಟೆ ಮತ್ತು ವಿರಾಜಪೇಟೆಗಳಲ್ಲಿ ತಜ್ಞವೈದ್ಯರ ಕೊರತೆ ಇದೆ ಎಂದು ಹೇಳಿದ್ದಾರೆ. ಹಲವೆಡೆ ಕೋವಿಡ್ ಕೇರ್ ಗಳನ್ನು ರೆಡಿ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಬೆಡ್ ಗಳ ಕೊರತೆ ಇಲ್ಲ ಎಂದು ಮೋಹನ್ ಕುಮಾರ್ ಸ್ಪಷ್ಟಪಡಿಸಿದರು.