ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ಇಂದು ಬೆಳಗ್ಗೆ ಸಿಎಂ ನಿವಾಸದಲ್ಲಿ ನಡೆದ ಉನ್ನತ ಮಟ್ಟದ ತುರ್ತು ಸಭೆಯಲ್ಲಿ ಪಬ್ಲಿಕ್ ಟಿವಿ ವರದಿ ಪ್ರತಿಧ್ವನಿಸಿದೆ. ಕೋವಿಡ್‍ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡಲು ಪ್ಯಾಕೇಜ್ ಫಿಕ್ಸ್ ಮಾಡಿರುವ ಕುರಿತು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಅಧಿಕಾರಿಗಳನ್ನು ಇಂದು ತರಾಟೆಗೆ ತೆಗೆದುಕೊಂಡರು.
ಸಭೆ ಆರಂಭವಾಗುತ್ತಿದ್ದಂತೆಯೇ ಸಿಎಂ ನಿನ್ನೆ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿದ್ದ ಅಂತ್ಯಸಂಸ್ಕಾರ ಪ್ಯಾಕೇಜ್ ವರದಿಯನ್ನು ಪ್ರಸ್ತಾಪ ಮಾಡಿದರು. ಅಲ್ಲದೆ ಸಭೆಯಲ್ಲಿ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಅವರ ಬಳಿ, ಏನ್ರೀ ಮಾಡ್ತಾ ಇದ್ದೀರಾ..? ಪಬ್ಲಿಕ್ ಟಿವಿಯಲ್ಲಿ ವರದಿ ನೋಡಿದ್ರಾ..? ಆ ಬಗ್ಗೆ ಕಠಿಣ ಕ್ರಮ ಆಗಬೇಕು. ಆ ವಿಚಾರದಲ್ಲಿ ಜನ ನಮ್ಮನ್ನ ಕ್ಷಮಿಸೋದಿಲ್ಲ. ನಾನು ನಿಮ್ಮನ್ನ ಕ್ಷಮಿಸೋದಿಲ್ಲ ಎಂದು ಗರಂ ಆದರು.
ಇದೇ ವೇಳೆ ಆರೋಗ್ಯ ಸಚಿವ ಸುಧಾಕರ್‍ಗೂ ಸೂಚನೆ ಕೊಟ್ಟ ಸಿಎಂ ಯಡಿಯೂರಪ್ಪ, ಯಾವುದನ್ನಾದ್ರೂ ಸಹಿಸ್ಕೋಬಹುದು ಸುಧಾಕರ್. ಈ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸಿ ಎಂದು ತಾಕೀತು ಮಾಡಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಸಾಂಕ್ರಾಮಿಕ ನಿಯಂತ್ರಣ ಕುರಿತು ಇಂದು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು. ಜನರ ಸುರಕ್ಷತೆ ಮತ್ತು ಜಾಗೃತಿಗಾಗಿ ತೆಗೆದುಕೊಳ್ಳಬೇಕಿರುವ ಕ್ರಮಗಳು, ಸೋಂಕಿತರಿಗೆ ಚಿಕಿತ್ಸೆ, ವೈದ್ಯಕೀಯ ಸೌಕರ್ಯ, ಲಸಿಕೆ ವಿತರಣೆ ಸೇರಿದಂತೆ ಎಲ್ಲ ಮಾಹಿತಿ ಪಡೆದು, ಅಧಿಕಾರಿಗಳಿಗೆ ಅಗತ್ಯಸೂಚನೆ ನೀಡಲಾಗಿದೆ pic.twitter.com/dvqMPmRBlT
— B.S.Yediyurappa (@BSYBJP) April 16, 2021
ಏನಿದು ಪ್ಯಾಕೇಜ್..?
ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆಗೆ 35 ಸಾವಿರ ರೂಪಾಯಿ, ಆಸ್ಪತ್ರೆಯಿಂದ ಚಿತಾಗಾರಕ್ಕೆ 13,000 ರೂ., ಸಂಬಂಧಿಕರಿಗೆ ಪಿಪಿಇ ಕಿಟ್ ನೀಡಲು ತಲಾ 1 ಸಾವಿರ, ಶವಪೂಜೆ ಪ್ರಕ್ರಿಯೆಗೆ 10,000 ರೂ. ಹಾಗೂ ಶವಸಂಸ್ಕಾರ ಮಾಡಲು 6,500 ರೂ.ಕೊಡಬೇಕಾಗಿತ್ತು. ಈ ಬಗ್ಗೆ ಗುರುವಾರ ಮಧ್ಯಾಹ್ನದಿಂದಲೇ ಪಬ್ಲಿಕ್ ಟಿವಿ ವಿಸ್ತøತ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಬಿಬಿಎಂಪಿ ವಿಶೇಷ ಆಯುಕ್ತ ಗೌರವ ಗುಪ್ತಾ, ಕೊರೊನಾ ಪೀಡತರ ಶವ ಸಂಸ್ಕಾರ ಸಂಪೂರ್ಣ ಉಚಿತ ಎಂದು ಸ್ಪಷ್ಟಪಡಿಸಿದ್ದರು.
ಈ ಸಂಬಂಧ ನಿನ್ನೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಅವರು, 7 ಸ್ಮಶಾನಗಳನ್ನು ಶವ ಸಂಸ್ಕಾರಕ್ಕೆ ಮೀಸಲಿಡಲಾಗಿದೆ. ಮೃತದೇಹವನ್ನು ಸ್ಮಶಾನಕ್ಕೆ ಅಂಬುಲೆನ್ಸ್ ನಲ್ಲಿ ಉಚಿತವಾಗಿ ಸಾಗಿಸಬೇಕು. ಒಂದು ವೇಳೆ ಹಣಕ್ಕೆ ಡಿಮಾಂಡ್ ಮಾಡಿದ್ರೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಖಾಸಗಿ ಅಂಬುಲೆನ್ಸ್ ಗಳಿಗೆ ಎಚ್ಚರಿಕೆ ನೀಡಿದ್ದರು.