ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಮೃತದೇಹದ ಮೇಲಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಕೊಟ್ಟೂರು ತಾಲೂಕಿನ ಇಂದ್ರಜಿತ್ ಅವರು ಆರೋಪವನ್ನು ಮಾಡಿದ್ದಾರೆ. ಕೊಟ್ಟೂರು ತಾಲೂಕಿನ ಮಲ್ಕಾನಯಹಳ್ಳಿ ಮಹಿಳೆಗೆ ಸೆಪ್ಟೆಂಬರ್ 12ರಂದು ಕೋವಿಡ್ ಸೋಂಕು ದೃಢಪಟ್ಟಿತ್ತು. ಕೆಲ ದಿನಗಳ ಕಾಲ ಹೊಸಪೇಟೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಕೋವಿಡ್ ನೆಗಟಿವ್ ಕೂಡ ಬಂದಿತ್ತು. ಆದರೆ, ಆರೋಗ್ಯದಲ್ಲಿ ಚೇತರಿಕೆ ಕಾಣದ ಪರಿಣಾಮ ಬಳ್ಳಾರಿಯ ಕೋವಿಡ್ ಜಿಲ್ಲಾಸ್ಪತ್ರೆಗೆ ಸೆಪ್ಟೆಂಬರ್ 27ರಂದು ದಾಖಲಿಸಲಾಗಿತ್ತು.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸೆಪ್ಟೆಂಬರ್ 28ರಂದು ಮಹಿಳೆ ಮೃತಪಟ್ಟಿದ್ದರು. ಕೋವಿಡ್ ವರದಿ ನೆಗೆಟಿವ್ ಬಂದ ಕಾರಣ ಮೃತ ದೇಹದವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದರು. ಆದರೆ ಈ ವೇಳೆ ಮಹಿಳೆಯ ಮೈಮೇಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕೊರಳಲ್ಲಿದ್ದ ಚಿನ್ನದ ಸರ, ಕಿವಿಯಲ್ಲಿದ್ದ ಓಲೆ ಬಗ್ಗೆ ಮಾಹಿತಿ ಇಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳುತ್ತಿದ್ದಾರೆ. ಯಾರನ್ನು ಕೇಳಿದರೂ ನೀಡುತ್ತಿಲ್ಲ ಎಂದು ಇಂದ್ರಜಿತ್ ಆರೋಪಿಸಿದ್ದಾರೆ.