ಕೋವಿಡ್‌ ಲಸಿಕೆ ನೀಡುವಂತೆ ಮೋದಿಗೆ ಕೆನಡಾ ಪ್ರಧಾನಿ ಕರೆ

Public TV
1 Min Read
justin trudeau modi e1613020462356

ನವದೆಹಲಿ: ರೈತರ ಪ್ರತಿಭಟನೆಗೆ ಬೆಂಬಲ ನೀಡಿ ಭಾರತೀಯರ ಟೀಕೆಗೆ ಗುರಿಯಾಗಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಕೋವಿಡ್‌ ಲಸಿಕೆ ನೀಡಬೇಕೆಂದು ಕೇಳಿದ್ದಾರೆ.

ಈ ಸಂಬಂಧ ಕೆನಡಾ ಪ್ರಧಾನಿಗೆ ಧನ್ಯವಾದ ತಿಳಿಸಿದ ಮೋದಿ, ನನ್ನ ಸ್ನೇಹಿತ ಜಸ್ಟಿನ್ ಟ್ರುಡೊ ಅವರಿಂದ ಕರೆ ಸ್ವೀಕರಿಸಲು ಸಂತೋಷವಾಗಿದೆ. ಕೆನಡಾ ಕೇಳಿದಷ್ಟು ಕೋವಿಡ್ ಲಸಿಕೆಗಳನ್ನು ಪೂರೈಸಲು ಭಾರತ ಪ್ರಯತ್ನ ಮಾಡಲಿದೆ ಎಂದು ಭರವಸೆ ನೀಡಿದ್ದೇನೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ಆರ್ಥಿಕ ಚೇತರಿಕೆಯಂತಹ ಇತರ ಪ್ರಮುಖ ವಿಷಯಗಳ ಬಗ್ಗೆ ಸಹಯೋಗವನ್ನು ಮುಂದುವರಿಸಲು ನಾವು ಒಪ್ಪಿದ್ದೇವೆ ಎಂದು ಟ್ವೀಟ್‌ ಮಾಡಿದ್ದಾರೆ.

ಡಿಸೆಂಬರ್‌ನಲ್ಲಿ ಟ್ರುಡೋ ರೈತರ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಭಾರತ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಘಟನೆಯ ಬಳಿಕ ಭಾರತ ಮತ್ತು ಕೆನಡಾದ ಸಂಬಂಧಗಳು ಹಾಳಾಗಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು.

ಕರೆ ಮಾಡಿದ್ದು ಯಾಕೆ?
ಕೆನಡಾ ಫೈಝರ್‌ ಸೇರಿದಂತೆ ಹಲವು ಲಸಿಕೆ ತಯಾರಿಕಾ ಕಂಪನಿಗಳ ಜೊತೆ ಮಾತುಕತೆ ನಡೆಸಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ಸಿಕ್ಕಿರಲಿಲ್ಲ. ಈ ಸಂಬಂಧ ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು ಸರ್ಕಾರವನ್ನು ಟೀಕಿಸಿದ್ದವು. ಈ ನಡುವೆ ಕೆನಡಾದ ವಿರೋಧ ಪಕ್ಷದ ಸದಸ್ಯೆ ಮಿಚೆಲ್ ರೆಂಪೆಲ್ ಗಾರ್ನರ್ ಅವರು ಸರ್ಕಾರವನ್ನು ಪ್ರಶ್ನಿಸಿ ಕೋವಿಡ್‌ ಲಸಿಕೆ ಸಂಬಂಧ ಭಾರತದ ಪ್ರಧಾನಿಗೆ ಕರೆ ಹೋಗಿದ್ಯಾ ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಸರ್ಕಾರ ಯಾವುದೇ ಉತ್ತರ ನೀಡಿರಲಿಲ್ಲ. ಈ ಎಲ್ಲ ವಿದ್ಯಮಾನಗಳು ನಡೆದ ಬಳಿಕ ಟ್ರುಡೊ ಮೋದಿಗೆ ಕರೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *