– ಕ್ರೂರವಾಗಿ ಕೊಂದು ಮನೆಯಲ್ಲೇ ಸಮಾಧಿ
ಲಕ್ನೋ: ಕೋಲಿನಿಂದ ಬಡಿದು, 15 ಬಾರಿ ಚುಚ್ಚಿ ಮಲತಾಯಿಯೊಬ್ಬಳು ಮಲಮಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ದಿನ ಮಗುವಿಗೆ ಮಲತಾಯಿ ದೈಹಿಕ ಕಿರುಕುಳ ನೀಡುತ್ತಿದ್ದಳು. ಒಂದು ದಿನ ಮನೆಗೆಲಸವನ್ನು ಮಾಡದೇ ಮಲಗಿದ್ದ ಮಗುವನ್ನು ಮಲತಾಯಿ ಕಾಲಿನಿಂದ ಮುಖಕ್ಕೆ ಒದ್ದು, ಹಿಂಸೆ ನೀಡಿದ್ದಳು. ಆದರೆ ಕೆಲ ದಿನಗಳಿಂದ ಬಾಲಕಿ ಕಾಣೆಯಾಗಿದ್ದಳು. ಇದನ್ನು ಗಮನಿಸಿದ ಪಕ್ಕದ ಮನೆಯವರಾದ ಕಪೂರ್ ಚಂದ್ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೆ ಬಾಲಕಿ ತಂದೆ, ಆಕೆ ನಮ್ಮ ಸಂಬಂಧಿಕರ ಮನೆಗೆ ಹೋಗಿದ್ದಾಳೆ. ಮತ್ತೆ ಕೆಲ ದಿನಗಳ ನಂತರ ವಾಪಸ್ ಬರುತ್ತಾಳೆ ಎಂದು ಹೇಳಿದ್ದಾರೆ. ಆದರೆ ಮೃತ ಬಾಲಕಿಯ ಸಹೋದರಿ ಮಾತ್ರ ಇಲ್ಲ ಆಕೆಯನ್ನು ಅಮ್ಮ ಹೊಡೆದು ಕೊಂದು ಹಾಕಿದರು ಎಂದು ಹೇಳಿದ್ದಾಳೆ. ಆಗ ತಂದೆ ಇಲ್ಲ ಆಕೆ ಮನೆಯ ಮೇಲ್ಚಾವಣಿ ಮೇಲಿಂದ ಬಿದ್ದು ಸಾವನ್ನಪ್ಪಿದಳು ಎಂದು ಕಥೆ ಕಟ್ಟಲು ಆರಂಭಿಸಿದ್ದಾರೆ.
ಇದರಿಂದ ಅನುಮಾನಗೊಂಡ ಪೊಲೀಸರು, ತಂದೆಯನ್ನು ಠಾಣೆಗೆ ಕರೆಸಿ ತೀವ್ರ ವಿಚಾರಣೆ ಒಳಪಡಿಸಿದ್ದಾರೆ. ಈ ವೇಳೆ ನಾವೇ ಮಗುವನ್ನು ಕೊಲೆ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾನೆ. ಆಕೆಯ ಮಲತಾಯಿ ಆಕೆಯನ್ನು ಹತ್ಯೆ ಮಾಡಿದ್ದಾರೆ. ನಂತರ ಈ ವಿಚಾರವನ್ನು ತಂದೆಗೆ ಹೇಳಿದ್ದಾರೆ. ಆಗ ಇಬ್ಬರು ಸೇರಿ ಮಗುವನ್ನು ಮನೆಯಲ್ಲೇ ಗುಂಡಿ ತೋಡಿ ಸಮಾಧಿ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಿಸಿದ್ದು, ವರದಿಯಲ್ಲಿ ಬಾಲಕಿಯನ್ನು ದೊಣ್ಣೆಯಿಂದ ಹೊಡೆದು ಮತ್ತು 15 ಬಾರಿ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅತ್ಯಂತ ಕ್ರೂರವಾಗಿ ಕೊಂದು ಮನೆಯಲ್ಲೆ ಸಮಾಧಿ ಮಾಡಿದ್ದಾರೆ. ಕೊಲೆ ಮಾಡಿದ ಮಲತಾಯಿ ಪರಾರಿಯಾಗಿದ್ದಾಳೆ ಎಂದು ಬರೇಲಿ ಠಾಣೆಯ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.