ಕೋಲಾರ: ಜಿಲ್ಲೆಯಲ್ಲಿ ಸಹ ವರುಣನ ಅಬ್ಬರ ಜೋರಾಗಿದ್ದು, ಭಾರೀ ಮಳೆಗೆ ರಾಗಿ ಸೇರಿದಂತೆ ವಿವಿಧ ಬೆಳೆ ನೆಲಕಚ್ಚಿದೆ. ಇದರಿಂದಾಗಿ ರೈತರು ಬೆಳೆದ ವರ್ಷದ ಕೂಳು ನೆಲದ ಪಾಲಾಗಿದೆ. ಅದೊಂದು ಬೆಳೆ ಹೊಲದಿಂದ ಮನೆ ಸೇರಿದರೆ ಸಾಕಾಗಿತ್ತು, ನೆಮ್ಮದಿಯಿಂದ ಇರಬಹುದಿತ್ತು ಎಂದು ರೈತರು ಅಂದುಕೊಂಡಿದ್ದರು. ಆದರೆ ಮಳೆಯಿಂದಾಗಿ ಎಲ್ಲವೂ ಹಾಳಾಗಿದೆ.
Advertisement
ವಾಯುಭಾರ ಕುಸಿತದಿಂದಾಗಿ ಕೋಲಾರ ಜಿಲ್ಲೆ ಸೇರಿದಂತೆ ಹಲವೆಡೆ ಜೋರು ಮಳೆಯಾಗುತ್ತಿದೆ, ಕೆಲವೆಡೆ ಮೋಡ ಕವಿದ ವಾತಾವರಣವಿದೆ. ಭಾರೀ ಮಳೆಯಿಂದಾಗಿ ಆಳೆತ್ತರಕ್ಕೆ ಬೆಳೆದು ನಿಂತಿರುವ ರಾಗಿ ತೆನೆ ನೆಲಕ್ಕುರುಳಿದೆ. ಇದರಿಂದಾಗಿ ಜಿಲ್ಲೆಯ ರೈತರು ಕಂಗಾಲಾಗುವಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಪರಿತಪಿಸುತ್ತಿದ್ದಾರೆ.
Advertisement
Advertisement
ರೈತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದಿದ್ದ ಬೆಳೆ ಇನ್ನೇನು ಕಟಾವು ಮಾಡಿ ಮನೆಗೆ ಕೊಂಡೊಯ್ಯಬೇಕು ಎನ್ನುವಷ್ಟರಲ್ಲಿ ಮಳೆ ಹಾಗೂ ಮೋಡಕವಿದ ವಾರಾವರಣ ಪರಿಣಾಮ ಹಾಳಾಗಿದೆ. ರಾಗಿ ತೆನೆಗಳೆಲ್ಲ ನೆನೆದು ಹಾಳಾಗಿದ್ದು, ಕಪ್ಪು ಬಣ್ಣ ಬರಲಾರಂಭಿಸಿದೆ. ಇದರಿಂದ ವರ್ಷಪೂರ್ತಿ ಕಷ್ಟು ಪಟ್ಟು ಬೆಳೆದಿದ್ದ ಸಾವಿರಾರು ರೈತರ ವರ್ಷದ ಕೂಳಿಗೆ ಮಳೆ ಕೊಳ್ಳಿ ಇಟ್ಟಿದೆ. ನೂರಾರು ರೈತರು ಸಂಕಷ್ಟಕ್ಕೆ ಬಿದಿದ್ದು ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ.
Advertisement
ಈ ವರ್ಷ ಮುಂಗಾರು ಆರಂಭದಿಂದಲೂ ಉತ್ತಮ ಮಳೆಯಾಗಿದೆ. ಹಿಂಗಾರು ಮಳೆಯೂ ಚೆನ್ನಾಗಿ ಬಂದ ಪರಿಣಾಮ ಒಳ್ಳೆಯ ದ್ವಿದಳ ದಾನ್ಯಗಳ ಬೆಳೆ ಬಂದಿತ್ತು, ಈ ವರ್ಷ 659.12ಮಿ.ಮೀ ವಾಡಿಕೆಗೆ 822.2.ಮಿ.ಮೀ ಮಳೆಯಾಗಿದ್ದು, 68,505 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಈ ಬಾರಿ ಒಳ್ಳೆಯ ಬೆಳೆ ಸಹ ಬಂದಿದೆ. ಸತತ ಎರಡು ವರ್ಷಗಳಿಂದ ಬರಕ್ಕೆ ಬಲಿಯಾಗಿದ್ದ ರೈತರಲ್ಲಿ ಸಂತಸ ಮನೆ ಮಾಡಿತ್ತು.
ಇನ್ನೂ ಹಲವೆಡೆ ಮುಂದಿನ ವಾರ ರಾಗಿ ಬೆಳೆಯನ್ನು ಕಟಾವು ಮಾಡಬೇಕಾಗಿದೆ, ಈ ಸಂದರ್ಭದಲ್ಲಿ ವಾಯುಭಾರ ಕುಸಿತಗೊಂಡು ಕಳೆದ ನಾಲ್ಕೈದು ದಿನಗಳಿಂದ ಸುರಿದ ಜಿಟಿ ಜಿಟಿ ಮಳೆ ಹಾಗೂ ಮೋಡಕವಿದ ವಾರಾವರಣದಿಂದ ರಾಗಿ ತೆನೆಯೆಲ್ಲ ನೆಲ ಕಚ್ಚಿದೆ. ಕೆಲವೆಡೆ ರೈತರು ಈಗಾಗಲೇ ರಾಗಿ ತೆನೆ ಕಟಾವು ಮಾಡಿದ್ದು, ಮಳೆಯಿಂದ ರಕ್ಷಿಸಿಕೊಳ್ಳೋದು ಕಷ್ಟದ ಕೆಲಸವಾಗಿದೆ. ಸಾಲ ಮಾಡಿ ಬೆಳೆದಿದ್ದ ಬೆಳೆ ಕಣ್ಣ ಮುಂದೆ ಹಾಳಾಗುತ್ತಿದ್ದು ರೈತರಿಗೆ ದಿಕ್ಕು ತೋಚದಂತಾಗಿದೆ. 4-5 ರಾಗಿ ತೆನೆಗಳನ್ನು ಕಟ್ಟಿ ರಾಗಿಯನ್ನು ಕಾಪಾಡಿಕೊಳ್ಳಿ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಸರಿ ಹೋಗುತ್ತೆ ಅಂದುಕೊಂಡು ಉಳಿಸಿಕೊಂಡಿದ್ದ ರಾಗಿ ಬೆಳೆ ಈಗ ವಾಯುಭಾರ ಕುಸಿತಕ್ಕೆ ಬಲಿಯಾಗಿದೆ.