ಕೋಲಾರ: ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಸಂಜೆ ಕೇವಲ ಅರ್ಧ ಗಂಟೆ ಸುರಿದ ಬಿರುಗಾಳಿ, ಗುಡುಗು ಸಹಿತ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಯಾಗಿದೆ. ಭಾರಿ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರನ್ನು ಹೊರ ಹಾಕಲು ನಿವಾಸಿಗಳು ಹರಸಾಹಸಪಟ್ಟರು.
ನಗರದ ರಹಮತ್ ನಗರದ ವಾರ್ಡ್ ಸಂಖ್ಯೆ 30, 31 ಹಾಗೂ 32 ರಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ಮಳೆ ನೀರಿನ ಜೊತೆಗೆ ಚರಂಡಿ ನೀರು ನುಗ್ಗಿದ ಪರಿಣಾಮ ಅವಾಂತರ ಸೃಷ್ಟಿಯಾಗಿದ್ದು, ನೀರನ್ನು ಹೊರಹಾಕಲು ಇಲ್ಲಿನ ನಿವಾಸಿಗಳು ಹರಸಾಹಸಪಟ್ಟರು. ಅಲ್ಲದೆ ಸರಿಯಾದ ಒಳ ಚರಂಡಿ ವ್ಯವಸ್ಥೆ ಮಾಡದ ನಗರಸಭೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು. ಇದನ್ನೂ ಓದಿ: ಇಂದು, ನಾಳೆ ರಾಜ್ಯಕ್ಕೆ ಭಾರೀ ಮಳೆ- ಹಲವೆಡೆ ಆರೆಂಜ್ ಅಲರ್ಟ್
ಗುಡುಗು ಸಹಿತ ಭಾರೀ ಮಳೆಗೆ ಕೋಲಾರ ಜಿಲ್ಲಾಸ್ಪತ್ರೆಯೊಳಗೂ ಮಳೆ ನೀರು ನುಗ್ಗಿತ್ತು. ಆಸ್ಪತ್ರೆಯ ಲ್ಯಾಬ್ ಹಾಗೂ ರಿಸೆಪಶನ್ ವಿಭಾಗದಲ್ಲಿ ನೀರು ನುಗ್ಗಿದ ಪರಿಣಾಮ ಕೆರೆಯಂತ್ತಾಗಿತ್ತು. ಲ್ಯಾಬ್ ಬಳಿ ಮಳೆ ನೀರಿನ ಪೈಪ್ ಬ್ಲಾಕ್ ಆಗಿ ಆಸ್ಪತ್ರೆ ಒಳಗೆ ನೀರು ನುಗ್ಗಿತ್ತು, ಹಾಗಾಗಿ ಕೆಲಕಾಲ ನೀರು ಆಸ್ಪತ್ರೆಯನ್ನು ಆವರಿಸಿತ್ತು. ಬಳಿಕ ಸಿಬ್ಬಂದಿ ನೀರನ್ನು ಹೊರ ಹಾಕಿದರು.