– ಕೊರೊನಾ ನಡುವೆ ಸ್ವಾವಲಂಬಿ ಬದುಕು ಕಟ್ಟಿಕೊಳ್ತಿರೋ ವಕೀಲ
ಮಂಡ್ಯ: ಕೊರೊನಾ ಮಹಮಾರಿಗೆ ಇಡೀ ದೇಶವೇ ನಲುಗಿದೆ. ಬಡವ, ಶ್ರೀಮಂತ ಎನ್ನದೆ ಅದೆಷ್ಟೋ ಜನ ಲಾಕ್‍ಡೌನ್‍ನಿಂದಾಗಿ ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗೆ ಕೋರ್ಟ್ ಕಲಾಪ ನಡೆಯದ ಕಾರಣ ಸಂಕಷ್ಟಕ್ಕೆ ಸಿಲುಕಿರುವ ಮಂಡ್ಯದ ವಕೀಲರೊಬ್ಬರು ಪಾನಿಪುರಿ ವ್ಯಾಪಾರ ಶುರುಮಾಡಿದ್ದಾರೆ.
Advertisement
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದವರಾಗಿರುವ 30ವರ್ಷದ ಪ್ರತಾಪ್, ವೃತ್ತಿಯಲ್ಲಿ ಹೈಕೋರ್ಟ್ ವಕೀಲರು. ಕಳೆದ 6 ವರ್ಷಗಳಿಂದ ಹೈಕೋರ್ಟ್‍ನ ಹಿರಿಯ ವಕೀಲ ಉಮಾಕಾಂತ್ ಅವರ ಬಳಿ ಕಿರಿಯ ವಕೀಲರಾಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಸಿಟಿ ಸಿವಿಲ್ ಕೋರ್ಟ್‍ನಲ್ಲೂ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕೊರೊನಾ ತಡೆಯಲು ಲಾಕ್‍ಡೌನ್ ಮಾಡಿದ್ದರಿಂದ ಕೋರ್ಟ್ ಕಾರ್ಯಕಲಾಪಗಳು ನಿಂತಿವೆ. ಹೀಗಾಗಿ ಪ್ರತಾಪ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.
Advertisement
Advertisement
ಲಾಕ್‍ಡೌನ್ ವೇಳೆ ಬೆಂಗಳೂರಿನಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದ್ದರಿಂದ ಕಳೆದ 2-3 ತಿಂಗಳ ಹಿಂದೆ ಎಂಜಿನಿಯರಿಂಗ್ ಓದಿರುವ ಪತ್ನಿ ಹಾಗೂ ಒಂದುವರೆ ತಿಂಗಳ ಮಗುವಿನೊಂದಿಗೆ ಬೆಂಗಳೂರು ಬಿಟ್ಟು ಹುಟ್ಟೂರು ವಳಗೆರೆಹಳ್ಳಿಗೆ ವಾಪಾಸ್ಸಾಗಿದ್ದಾರೆ. ಈ ವೇಳೆ ಜೀವನ ಸಾಗಿಸಲು ಹೊಸದೊಂದು ಬ್ಯುಸಿನೆಸ್ ಶುರುಮಾಡುವ ಆಲೋಚನೆಯೂ ಮಾಡಿದ್ದಾರೆ. ಆಗ ಪ್ರತಾಪ್‍ಗೆ ಹೊಳೆದಿದ್ದು ಪಾನಿಪುರಿ ವ್ಯಾಪಾರ. ವೃತ್ತಿಯಲ್ಲಿ ವಕೀಲರಾದರೂ ಯಾವುದೇ ಮುಜುಗರಕ್ಕೊಳಗಾಗದೆ ತನ್ನೂರಿನ ಸಣ್ಣ ಅಂಗಡಿ ಮನೆಯೊಂದರಲ್ಲಿ ಚಾಟ್ ಸೆಂಟರ್ ಆರಂಭಿಸಿರುವ ಪ್ರತಾಪ್, ಪ್ರತಿನಿತ್ಯ ಗೋಬಿ, ಪಾನಿಪುರಿ, ಆಮ್ಲೇಟ್ ಸೇರಿದಂತೆ ರುಚಿಕರ ಚಾಟ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
Advertisement
ಇದರಿಂದ ಬಂದ ಆದಾಯದಲ್ಲಿ ತಮ್ಮ ಕುಟುಂಬ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ವಕೀಲರಾಗಿದ್ದ ನಿಮಗೆ ಇದು ಹೇಗೆ ಸಾಧ್ಯವಾಯ್ತು ಎಂದು ಪ್ರಶ್ನಿಸಿದರೆ, ಲಾಕ್‍ಡೌನ್‍ನಿಂದ ಧೃತಿಗೆಡದೆ ಸ್ವಾಭಿಮಾನದ ಬದುಕು ನಡೆಸುತ್ತಿದ್ದೇನೆ ಎನ್ನುತ್ತಾರೆ ಪ್ರತಾಪ್.
ಪ್ರತಾಪ್ ತಯಾರಿಸಿದ ರುಚಿಕರ ಚಾಟ್ಸ್ ಸವಿಯಲು ಬೇರೆ ಗ್ರಾಮಗಳಿಂದ ಸಹ ಗ್ರಾಹಕರು ಆಗಮಿಸುತ್ತಿದ್ದು, ಪ್ರತಾಪ್ ಕೆಲಸಕ್ಕೆ ವಳಗೆರೆಹಳ್ಳಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಕಷ್ಟದ ಕಾಲದಲ್ಲಿ ವಕೀಲ ಎಂಬ ಗರ್ವ ಪಡದೆ ಪಾನಿಪುರಿ ವ್ಯಾಪಾರ ಮಾಡುತ್ತಿರುವ ಪ್ರತಾಪ್, ಯುವಜನತೆಗೆ ಮಾದರಿ ಎಂದಿದ್ದಾರೆ.