ಉಡುಪಿ: ಕರಾವಳಿಯ ವೀರ ಕ್ರೀಡೆ ಕಂಬಳದಲ್ಲಿ ಆಗಿಂದ್ದಾಗ್ಗೆ ಬದಲಾವಣೆಗಳು ನಡೆಯುತ್ತಾನೇ ಇದೆ. ಕೃಷಿಕರ ವಿರಾಮದ ಕಾಲದಲ್ಲಿ ಆರಂಭವಾದ ಕಂಬಳ ಇದೀಗ ಅಂತಾರಾಷ್ಟ್ರೀಯ ಸೆಳೆತ ಪಡೆದುಕೊಂಡಿದೆ. ಪುರುಷರ ಪೌರುಷದ ಗ್ರಾಮೀಣ ಕ್ರೀಡೆಗೆ ಮಹಿಳೆಯರ ಎಂಟ್ರಿ ಕೊಡುವ ಕಾಲ ಸನ್ನಿಹಿತವಾಗಿದೆ.
ಕರಾವಳಿ ಅವಳಿ ಜಿಲ್ಲೆಗಳಲ್ಲಿ ಕಂಬಳದ ಸೀಜನ್ ನಡೀತಿದೆ. ಕೊಬ್ಬಿದ ಕೋಣಗಳು ಜಿದ್ದಿಗಿಳಿದು ಕರೆಗಳಲ್ಲಿ ಓಡುತ್ತಿವೆ. ಕೃಷಿ ಪರಂಪರೆಯ ಕಂಬಳದಲ್ಲಿ ಹೊಸ ದಾಖಲೆ, ಪ್ರಯೋಗ ನಡೆದಿದೆ. ಜಬರ್ದಸ್ತ್ ಕೋಣಗಳ ಜೊತೆ ಈಗ ಬಾಲಕಿಯೋರ್ವಳು ಕಂಬಳ ಕರೆಗೆ ಇಳಿಯುವ ಮೂಲಕ ಕರಾವಳಿಯ ಕಂಬಳ ಕ್ರೀಡೆಗೆ ಹೊಸ ಭಾಷ್ಯ ಬರೆದಿದ್ದಾಳೆ.
Advertisement
Advertisement
ಕಾರ್ಕಳ ತಾಲೂಕು ಮಿಯಾರಿನ ಲವಕುಶ ಜೋಡುಕರೆ ಕಂಬಳದಲ್ಲಿ ಬೈಂದೂರಿನ ಪರಮೇಶ್ವರ ಭಟ್ – ರಮ್ಯಾ ಅವರ ಪುತ್ರಿ ಚೈತ್ರಾ ಮೊತ್ತಮೊದಲ ಬಾರಿಗೆ ಕಂಬಳ ಕರೆಗೆ ಇಳಿದಿದ್ದಾಳೆ. ಈ ಮೂಲಕ ಪುರುಷ ಪ್ರಧಾನವಾಗಿರುವ ಕಂಬಳ ಕ್ರೀಡೆಯಲ್ಲಿ ಬಾಲಕಿಯ ಪ್ರವೇಶವಾಗಿದೆ.
Advertisement
ಕಾಲ್ತೊಡು ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿರುವ ಈಕೆಗೆ ಚಿಕ್ಕಂದಿನಿಂದ ಕಂಬಳದ ಆಸಕ್ತಿ ಕೊಣಗಳ ಮೇಲೆ ಅಕ್ಕರೆ. ಹಗ್ಗ ಹಿಡಿದು, ಕೋಣಗಳ ಯಜಮಾನಿಕೆ ಹೊತ್ತು ಕಂಬಳ ಕರೆಗೆ ಇಳಿಯುವ ಗತ್ತಿಗೆ ಜಾನಪದ ಕ್ರೀಡೆಯ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಈಕೆಯ ಸಹೋದರ ರಾಮ್ ಭಟ್ ಕೂಡ ಕಂಬಳಪ್ರೇಮಿ. ಕೋಣಗಳಿಗೆ ಸ್ನಾನ, ಹುರುಳಿ ಬೇಯಿಸಿ ತಿನ್ನಿಸೋದು ಎಲ್ಲಾ ಮಾಡ್ತಾಳೆ ಚೈತ್ರಾ ಭಟ್. ವಾರಾಂತ್ಯ ಬಂದ್ರೆ ಸಾಕು ಟೀಶರ್ಟ್ ಹಾಕಿ ಮುಂಡಾಸು ಕಟ್ಟಿ ಹೊರಡುತ್ತಾಳೆ.
Advertisement
ಓಟಗಾರ ಶ್ರೀನಿವಾಸ ಗೌಡ ಅವರ ಫ್ಯಾನ್ ಈಕೆ. ಪುರುಷ ಪ್ರಧಾನ ಕಂಬಳ ಗದ್ದೆಗೆ ಆಯೋಜಕರು ಶಾಲು ಹಾಕಿ ಸ್ವಾಗತ ಮಾಡಿದ್ದಾರೆ. ಮುಂದೆ ಚೈತ್ರಾ ಕೋಣಗಳನ್ನು ಓಡಿಸಿ ಮೆಡಲ್ ಗೆಲ್ಲುವ ಕನಸು ಇಟ್ಟುಕೊಂಡಿದ್ದಾಳೆ. ಮಹಿಳಾ ಓಟಗಾರರಿಗೂ ಪ್ರಾಶಸ್ತ್ಯ ನೀಡುವ ಬಗ್ಗೆ ಕಂಬಳ ಅಕಾಡೆಮಿಯಲ್ಲಿ ಚರ್ಚೆ ನಡೆದಿದೆ. ಕೋಣ ಓಡಿಸದಿದ್ದರೂ ಕಂಬಳ ಗದ್ದೆಗೆ ಹೆಣ್ಮಗಳು ಇಳಿದಿರೋದು ದಾಖಲೆಯಾಗಿದೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನನಗೆ ಚಿಕ್ಕಂದಿನಿಂದ ಕೋಣಗಳು ಅಂದ್ರೆ ಭಾರೀ ಇಷ್ಟ. ಕಂಬಳಕ್ಕೆ ಹೋಗುತ್ತಾ ಇದ್ದೇನೆ. ಕೋಣ ಓಡಿಸ್ಬೇಕು ಅಂತ ಬಹಳ ಆಸೆಯಿದೆ. ಅವಕಾಶ ಸಿಕ್ಕರೆ ಕನೆ ಹಲಗೆ, ಕಿರಿಯ ವಿಭಾಗದಲ್ಲಿ ಕೋಣ ಓಡಿಸುತ್ತೇನೆ. ಮೀಯಾರ್ ಕಂಬಳದಲ್ಲಿ ಕಂಬಳ ಕರೆಯಲ್ಲೇ ಸನ್ಮಾನ ಮಾಡಿದ್ದಾರೆ ಬಹಳ ಖುಷಿಯಾಗುತ್ತದೆ. ಯಕ್ಷಗಾನದಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ಕಹಾಗೆ ಕಂಬಳದಲ್ಲೂ ಸಿಗಬೇಕು ಅಂತಾಳೆ 11ರ ಹರೆಯದ ಚೈತ್ರಾ.
ತಂದೆ ಪರಮೇಶ್ವರ ಭಟ್ ಮಾತನಾಡಿ, ಕಂಬಳ ಕ್ಷೇತ್ರಕ್ಕೆ ಮಹಿಳೆಯರು ಬರಬೇಕೆಂದು ನಾನು ಬಹಳ ಹಿಂದಿನಿಂದ ಯೋಚಿಸುತ್ತಿದ್ದೆ. ನನ್ನ ಮಗಳೇ ಆ ಆಸಕ್ತಿ ಹೊಂದಿರೋದ್ರಿಂದ ಬೆಂಬಲಿಸುತ್ತಿದ್ದೇನೆ. ಕೋಣಗಳ ಪಾಲನೆ ಪೋಷಣೆ ಮಾಡುತ್ತಾಳೆ. ಅವುಗಳ ನಿಯಂತ್ರಣ ಸದ್ಯಕ್ಕೆ ಕಷ್ಟವಾಗಬಹುದು. ಸಿದ್ಧ ಮಾಡಿ ಕೊಟ್ಟರೆ ಓಡಿಸುವ ಕಲೆ ಬೆಳೆಸಿಯಾಳು ಎಂದರು.